ನವದೆಹಲಿ: ದೇಶಕ್ಕೆ ಸ್ವಾತಂತ್ರ ಬಂದ ಬಳಿಕ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸುವ ಗೌರವ ದೇಶದ ಪ್ರಧಾನಿಗೆ ಪ್ರಾಪ್ತವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಆ.೦೯ ರಂದು ನಡೆಯಲಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಕಳೆದ 75 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೇಶದ ರಾಜಕೀಯ ನಾಯಕರೊಬ್ಬರು ವಿಶ್ವಸಂಸ್ಥೆಯ ಅಂಗ ಸಂಸ್ಥೆಯೊಂದರ ಅಧ್ಯಕ್ಷತೆ ವಹಿಸಿಕೊಳ್ಳುತ್ತಿದ್ದಾರೆ. ಈ ಕುರಿತು ವಿಶ್ವಸಂಸ್ಥೆಯ ಮಾಜಿ ರಾಯಭಾರಿ ಸಯ್ಯದ್ ಅಕ್ಬರುದ್ದೀನ್ ಹೇಳಿದ್ದಾರೆ.
ಇದು ವರ್ಚುವಲ್ ಸಭೆಯಾಗಿದ್ದು, ಆನ್‌ಲೈನ್ ಮೂಲಕ ಭಾಗಯಾಗಲಿದ್ದಾರೆ. ಭಾರತಕ್ಕೆ ಇದೊಂದು ಐತಿಹಾಸಿಕ ಕ್ಷಣವಾಗಿದೆ. ಈ ಹಿಂದೆ 1992ರಲ್ಲಿ ಅಂದಿನ ಪ್ರಧಾನಿ ಪಿವಿ ನರಸಿಂಹ ರಾವ್ ಕೂಡ ಭದ್ರತಾ ಮಂಡಳಿಯ ಸಭೆಯಲ್ಲಿ ಭಾಗಿಯಾಗಿದ್ದರು. ಆದರೆ, ಅಧ್ಯಕ್ಷತೆ ವಹಿಸಿರಲಿಲ್ಲ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಸಭೆಯ ಅಧ್ಯಕ್ಷತೆ ವಹಿಸಲು ಒಪ್ಪಿದ್ದಾರೆ. ವಿಶ್ವಸಂಸ್ಥೆಯಲ್ಲಿ ದೀರ್ಘಕಾಲದಿಂದಲೂ ಭಾರತವು ಭದ್ರತಾ ಮಂಡಳಿಯ ಸುಧಾರಣೆ ಹಾಗೂ ಭಾರತಕ್ಕೆ ಖಾಯಂ ಸದಸ್ಯತ್ವದ ಬೇಡಿಕೆಯಿಡುತ್ತಾ ಬಂದಿದ್ದು ಈ ನಿಟ್ಟಿನಲ್ಲಿ ಆ ೦೯ ರ ಸಭೆ ಮಹತ್ವ ಪಡೆದಿದೆ.
ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷನಾಗುವ ಅವಕಾಶ ಇದುವರೆಗೆ 10 ಬಾರಿ ಸಿಕ್ಕಿದೆ. ಜೂನ್ 1950, ಸೆಪ್ಟೆಂಬರ್ 1967, ಡಿಸೆಂಬರ್ 1972, ಅಕ್ಟೋಬರ್ 1977, ಫೆಬ್ರವರಿ 1985, ಅಕ್ಟೋಬರ್ 1991, ಡಿಸೆಂಬರ್ 1992, ಆಗಸ್ಟ್ 2011, ನವೆಂಬರ್ 2012 ರಲ್ಲಿ ಭದ್ರತಾ ಮಂಡಳಿ ಅಧ್ಯಕ್ಷ ಸ್ಥಾನ ದೊರೆತಿತ್ತು ಇದೀಗ 10ನೇ ಬಾರಿಗೆ ಅಧ್ಯಕ್ಷ ಸ್ಥಾನದಲ್ಲಿದೆ. ಆಗಸ್ಟ್ 1 ರಂದು ಭಾನುವಾರ ಭದ್ರತಾ ಮಂಡಳಿಯ ಅಧ್ಯಕ್ಷ ರಾಷ್ಟ್ರವಾಗಿ ಅಧಿಕಾರ ಸ್ವೀಕರಿಸಲಿದೆ. ಅಧ್ಯಕ್ಷ ಸ್ಥಾನದ ಅವಧಿ ಒಂದು ತಿಂಗಳು ಮಾತ್ರ.