ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 2021-22ನೇ ಸಾಲಿನಲ್ಲಿ ಒಟ್ಟು ರೂ. 92.11 ಕೋಟಿ ಅಭಿವೃದ್ಧಿ ಅನುದಾನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಜೂರುಗೊಳಿಸಿದ್ದಾರೆ. ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇನ್ನಷ್ಟು ಅನುದಾನ ಮಂಜೂರು ಮಾಡುವ ಭರವಸೆ ನೀಡಿದ್ದಾರೆ. ಶ್ರಾವಣ ಮಾಸದಲ್ಲಿ ಈ ಅನುದಾನದಲ್ಲಿ ವಿವಿಧ ಕಾಮಗಾರಿಗಳ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.
ಅವರು ಸೋಮವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ವಿಶೇಷ ಮಂಜೂರಾತಿ ಕಾರ್ಯಕ್ರಮದಡಿ ರೂ. 1,800 ಲಕ್ಷ ನಮ್ಮ ಗ್ರಾಮ, ನಮ್ಮ ರಸ್ತೆ ಯೋಜನೆಯಡಿ ರೂ. 1 ಸಾವಿರ ಲಕ್ಷ, ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ ರೂ. 140 ಲಕ್ಷ, ಗ್ರಾಮ ಬಂಧು ಯೋಜನೆಯಡಿ ಕಾಲು ಸಂಕ ರಚನೆಗಾಗಿ ರೂ. 400 ಲಕ್ಷ, ಮಳೆಹಾನಿ ಅನುದಾನದಡಿ 20 ರಸ್ತೆ ಅಭಿವೃದ್ಧಿಗಾಗಿ ಒಟ್ಟು ರೂ. 254.22 ಲಕ್ಷ, ಜಿಲ್ಲಾ ಪಂಚಾಯತ್ ರಸ್ತೆ ಅಭಿವೃದ್ಧಿಗಾಗಿ ರೂ. 303.78 ಲಕ್ಷ, ಕೆದಂಬಾಡಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ರೂ. 500 ಲಕ್ಷ, ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ಅಭಿವೃದ್ಧಿಗಾಗಿ ರೂ. 200 ಲಕ್ಷ, ವಿಧಾನಸಭಾ ಕ್ಷೇತ್ರದ 102 ಕೊರಗ ಕುಟುಂಬಗಳ ಅಭಿವೃದ್ಧಿಗಾಗಿ ರೂ. 255 ಲಕ್ಷ, ಪ್ರಗತಿ ಕಾಲೊನಿಗಳ ರಸ್ತೆ ಅಭಿವೃದ್ಧಿಗಾಗಿ ರೂ. 260 ಲಕ್ಷ, ಜಲಜೀವನ್ ಮಿಶನ್ ಯೋಜನೆಯಡಿ ರೂ. 4092 ಲಕ್ಷ ಅನುದಾನ ಮಂಜೂರಾಗಿದೆ ಎಂದು ವಿವರಿಸಿದರು.
ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಒಟ್ಟು 1260 ಆಶ್ರಯ ಮನೆಗಳು ಮಂಜೂರಾಗಿದ್ದು, ಪ್ರತೀ ಗ್ರಾಮ ಪಂಚಾಯತ್ಗಳಿಗೆ ತಲಾ 35 ಮನೆಗಳಂತೆ ಮಂಜೂರು ಮಾಡಲಾಗುವುದು ಎಂದು ತಿಳಿಸಿದ ಶಾಸಕ ಮಠಂದೂರು, ಪುತ್ತೂರು ನಗರಸಭಾ ನೂತನ ಕಚೇರಿಯ ಕಾಮಗಾರಿಗಾಗಿ ಒಟ್ಟು ರೂ. 14 ಕೋಟಿ ಖರ್ಚಾಗಲಿದ್ದು, ನಗರಸಭೆಯ ಬಳಿ ರೂ. 4 ಕೋಟಿ ಅನುದಾನವಿದೆ. ಉಳಿದ ರೂ. 10 ಕೋಟಿಯನ್ನು ವಿಶೇಷ ಅನುದಾನದಡಿ ಮಂಜೂರುಗೊಳಿಸಲಾಗುವುದು. ಇಲ್ಲವೇ ಬ್ಯಾಂಕ್ ಸಾಲ ಮೂಲಕ ಕಾಮಗಾರಿಗಳನ್ನು ನಡೆಸಲಾಗುವುದು ಎಂದರು.
ದ.ಕ. ಜಿಲ್ಲೆಗೆ 4 ರೈತ ಸಂಪರ್ಕ ಕೇಂದ್ರಗಳು ಮಂಜೂರಾಗಿದ್ದು, ಈ ಪೈಕಿ 3 ಕೇಂದ್ರಗಳು ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಮಂಜೂರುಗೊಂಡಿವೆ. ತಲಾ ರೂ. 50 ಲಕ್ಷ ವೆಚ್ಚದಲ್ಲಿ ಉಪ್ಪಿನಂಗಡಿ, ಪುತ್ತೂರು, ವಿಟ್ಲಗಳಲ್ಲಿ ರೈತ ಸಂಪರ್ಕ ಕೇಂದ್ರಗಳು ನಿರ್ಮಾಣಗೊಳ್ಳಲಿವೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಪಶ್ಚಿಮ ವಾಹಿನಿ ಯೋಜನೆಗೆ ಸಂಬಂಧಿಸಿದ ರೂ. 50 ಕೋಟಿಯ ಕಾಮಗಾರಿಗಳಿಗೆ ರೂ. 40 ಕೋಟಿ ಮಂಜೂರಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ್ ರಾವ್, ಮಹಿಳಾ ಮೋರ್ಚಾದ ಅಧ್ಯಕ್ಷೆ ಜಯಶ್ರೀ ಎಸ್. ಶೆಟ್ಟಿ, ತಾಪಂ ಮಾಜಿ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್, ಪ್ರಮುಖರಾದ ಯುವರಾಜ ಪೆರಿಯತ್ತೋಡಿ, ನಿತೀಶ್ ಕುಮಾರ್ ಶಾಂತಿವನ ಉಪಸ್ಥಿತರಿದ್ದರು.