ಜಗತ್ತನ್ನೇ ಅಲ್ಲೋಲ ಕಲ್ಲೋಲಗೊಳಿಸಿದ ಕೊರೋನಾ ವೈರಸ್ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ಸಾಮಾಜಿಕ ಕಳಕಳಿಯಿಂದ ಮುನ್ನಡೆಯುವ ವಿವಿಧ ಸಂಘ ಸಂಸ್ಥೆಗಳು ಇಂದು ಸಂಕಷ್ಟಕರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ನೀರ್ಚಾಲು ಸಮೀಪದ ಕನ್ನೆಪ್ಪಾಡಿ ಆಶ್ರಯ ವೃದ್ಧಾಶ್ರಮವೂ ಸಂಕಷ್ಟಕ್ಕೆ ಸಿಲುಕಿದೆ.
1992 ರಲ್ಲಿ ಕಾಸರಗೋಡಿನ ಬಾಡಿಗೆ ಕಟ್ಟಡವೊಂದರಲ್ಲಿ ನಿವೃತ್ತ ಅಧ್ಯಾಪಿಕೆ ಶಾರದಾ ಟೀಚರ್ ಅವರ ನೇತೃತ್ವದಲ್ಲಿ ಹಿಂದೂ ಸೇವಾ ಪ್ರತಿಷ್ಠಾನ ಬೆಂಗಳೂರು ಇದರ ‘ಜನ ಸೇವಾ ವಿಶ್ವಸ್ಥ ನಿಧಿಯ’ ಅಧೀನದಲ್ಲಿ ಆಶ್ರಮವು ಆರಂಭವಾಗಿತ್ತು. ಸಂಪತ್ತನ್ನೆಲ್ಲಾ ಧಾರೆಯೆರೆದು ಆಶ್ರಮಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ಶಾರದಾ ಟೀಚರ್ ಅವರು ಕುಂಬಳೆ ಮುಳ್ಳೇರಿಯ ರಸ್ತೆಯ ನೀರ್ಚಾಲು ಸಮೀಪದ ಕನ್ನೆಪ್ಪಾಡಿಯಲ್ಲಿ ಸ್ಥಳವನ್ನು ಖರೀದಿಸಿ ಆಶ್ರಮವನ್ನು ಕಟ್ಟಿಬೆಳೆಸಿದರು. ಅನೇಕ ಜನರ ಪಾಲಿಗೆ ದೇವತಾ ಸ್ವರೂಪಿಯಾದ ಶಾರದಾ ಟೀಚರ್ ಅವರು ೨೦೧೭ರಲ್ಲಿ ಇಹಲೋಕವನ್ನು ತ್ಯಜಿಸಿದ್ದರು. ಬಳಿಕ ಜನಸೇವಾ ವಿಶ್ವಸ್ಥ ನಿಧಿಯ ಮೇಲ್ನೋಟದಲ್ಲಿ ಆಶ್ರಮವು ಕಾರ್ಯಾಚರಿಸುತ್ತಿದೆ.
ಪ್ರಸ್ತುತ ಆಶ್ರಮವು ೮ ಮಂದಿ ವೃದ್ಧರಿಗೆ ಆಶ್ರಯದಾತವಾಗಿದೆ. ಅವರ ಎಲ್ಲಾ ಆಗುಹೋಗುಗಳನ್ನು ನಿಭಾಯಿಸಲು ಸುಮಾರು ೫೦ ಸಾವಿರಕ್ಕೂ ಹೆಚ್ಚು ವೆಚ್ಚ ಪ್ರತೀ ತಿಂಗಳು ತಗಲುತ್ತಿದ್ದು, ಆಡಳಿತ ಸಮಿತಿಯು ಇದನ್ನು ನಿಭಾಯಿಸಲು ಹರಸಾಹಸ ಪಡುವಂತಾಗಿದೆ. ಸದ್ಯ ಆಶ್ರಮದ ವೃದ್ಧರ ದೈನಂದಿನ ವೆಚ್ಚ, ಸಿಬ್ಬಂದಿಗಳ ವೆಚ್ಚವನ್ನು ಭರಿಸಲಾಗದ ಪರಿಸ್ಥಿತಿ ಉಂಟಾಗಿದೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಬಾಧೆಯು ಇಲ್ಲಿನ ಆದಾಯಕ್ಕೆ ಬಲುದೊಡ್ಡ ಹೊಡೆತವನ್ನೇ ನೀಡಿದೆ.
ವಿವಿಧ ಸಂಘಸಂಸ್ಥೆಗಳ, ದಾನಿಗಳ ಸಹಾಯ ಹಸ್ತವೂ ಕಡಿಮೆಯಾಗಿ ನಿತ್ಯದ ಔಷಧೀಯ ವೆಚ್ಚಗಳು, ಸಿಬ್ಬಂದಿಗಳ ವೆಚ್ಚ, ಆಹಾರ ಸಾಮಾಗ್ರಿಗಳ ವೆಚ್ಚ ಭರಿಸಲು ಅಸಾಧ್ಯವಾಗುವತ್ತ ಸಾಗುತ್ತಿದೆ. ಆದರೂ ಕೆಲವೊಂದು ಮಂದಿ ದಾನಿಗಳು, ಜನಪರಕಾಳಜಿಯ ಚಿಂತಕರ ಸಹಾಯವು ವೃದ್ಧರಿಗೆ ನೆರವಾಗಿದೆ. ಜನ್ಮದಿನ, ವಿವಾಹ ದಿನಾಚರಣೆ ಮೊದಲಾದ ಶುಭದಿನಗಳನ್ನು ಈ ಇವರೊಂದಿಗೆ ಆಚರಿಸಿ ನೆಮ್ಮದಿಯನ್ನು ಕಂಡುಕೊಳ್ಳುತ್ತಾರೆ.
ನಾವು ಹೇಗೆ ಸಹಾಯಮಾಡಬಹುದು..?
ನಮ್ಮ ಹುಟ್ಟುಹಬ್ಬ, ವಿವಾಹ ವಾರ್ಷಿಕ, ಹಿರಿಯರ ದಿನಾಚರಣೆ ಮೊದಲಾದ ದಿನಗಳಲ್ಲಿ ಆಶ್ರಮಕ್ಕೆ ತೆರಳಿ ಅವರೊಂದಿಗೆ ಒಂದು ದಿನದ ಖರ್ಚುವೆಚ್ಚಗಳನ್ನು ತಾವೇ ಭರಿಸ ಬಹುದಾಗಿದೆ. ವೃದ್ಧರೊಂದಿಗೆ ಒಂದು ಹೊತ್ತಿನ ಊಟವನ್ನು ಮಾಡಿ ನೆಮ್ಮದಿಯನ್ನು ಕಂಡುಕೊಳ್ಳಬಹುದು. ತನ್ಮೂಲಕ ಸಮಾಜದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವವರಿಗೆ ನೆರವಾಗಬಹುದು. ತಮ್ಮ ಆತ್ಮೀಯರಲ್ಲೂ ಇಂತಹ ವಿಚಾರಗಳನ್ನು ತಿಳಿಸಿ ಆಶ್ರಮದ ಒಳಿತಿಗಾಗಿ ತಮ್ಮ ಕಿರುಸೇವೆಯನ್ನು ಮಾಡಬಹುದಾಗಿದೆ. ಇಂತಹ ಸನ್ಮನಸ್ಸುಗಳು ಆಶ್ರಮಕ್ಕೆ, ಅಲ್ಲಿ ವೃದ್ಧರಿಗೆ ವರದಾನವಾಗಲಿದೆ. ಆಶ್ರಮದಲ್ಲಿ ಹುಟ್ಟುಹಬ್ಬವನ್ನು ಆಚರಿಸುತ್ತಿರುವವರಿಗೆ ಹಿಂದೂ ಸಂಸ್ಕೃತಿಯ ಪ್ರಕಾರ ಆರತಿಯನ್ನು ಮಾಡಿ ಗೋವುಗಳಿಗೆ ಊಟವನ್ನು ನೀಡಿದ ನಂತರ ಊಟ ಮಾಡಲಾಗುತ್ತದೆ. ೩೩ ಕೋಟಿ ದೇವತೆಗಳ ಆವಾಸಸ್ಥಾನವಾದ ಗೋಮಾತೆಗೆ ಪೂಜೆ ಸಲ್ಲಿಸಲೂ ಇಲ್ಲಿ ಅವಕಾಶವಿದೆ. ಗೋವಿಗೆ ಮೇವನ್ನು, ಆಹಾರವನ್ನು ನೀಡಿಯೇ ಇಲ್ಲಿ ಆಹಾರವನ್ನು ಸೇವಿಸುವ ಕ್ರಮ ಇಂದಿಗೂ ಇದೆ.
ಆಡಳಿತ ಮಂಡಳಿ :
ಆಡಳಿತ ಸಮಿತಿಯ ಅಧ್ಯಕ್ಷ ಪುದುಕೋಳಿ ಶ್ರೀಕೃಷ್ಣ ಭಟ್, ಕಾರ್ಯದರ್ಶಿ ಶಿವಶಂಕರ ಭಟ್ ಗುಣಾಜೆ ಹಾಗೂ ಜನಪರ ಚಿಂತನೆಯ ಕಾರ್ಯಕರ್ತರ ತಂಡವು ಆಶ್ರಮದೊಂದಿಗಿದೆ. ದಾನಿಗಳ ನೆರವು ಆಶ್ರಮದ ಒಳಿತಿಗೆ ನೆರವಾಗಲಿದೆ.
ಸಮಾಜದಿಂದ ನಿರ್ಲಕ್ಷ್ಯಕ್ಕೆ ಒಳಗಾದ ವೃದ್ಧರಿಗೆ ಆಶ್ರಯವಾಗಿರುವ ಸಂಸ್ಥೆಯು ಅನೇಕ ವರ್ಷಗಳ ಕಾಲ ಮುನ್ನಡೆಯಲಿ ಎಂಬುದೇ ನಮ್ಮೆಲ್ಲರ ಆಶಯವಾಗಿದೆ. ಇದಕ್ಕೆ ದಾನಿಗಳ, ಊರವರ ಸಹಾಯ ಹಸ್ತ ಅಗತ್ಯವಾಗಿದೆ.
7025244218,9447653359,9496401061 ಸಂಪರ್ಕಿಸಬಹುದಾಗಿದೆ.