ಪುತ್ತೂರು: ಪುತ್ತೂರು ಬ್ಲಾಕ್ ಕಾಂಗ್ರೆಸ್‌ಗೆ ಅಧ್ಯಕ್ಷರ ನೇಮಕ ವಿಚಾರದಲ್ಲಿ ಮುನಿಸಿಕೊಂಡು ಪಕ್ಷದ ಚಟುವಟಿಕೆಯಿಂದ ದೂರ ಉಳಿದಿದ್ದ ಬ್ಲಾಕ್ ಕಾಂಗ್ರೆಸ್‌ನ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಕೃಷ್ಣ
ಪ್ರಸಾದ್ ಆಳ್ವ ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕಿಯನ್ನು ಭೇಟಿಯಾಗಿದ್ದು ಮತ್ತೆ ಪಕ್ಷದಲ್ಲಿ ಸಕ್ರಿಯರಾಗಿ ಕೆಲಸ ಮಾಡಲು ಅವರು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಬ್ಲಾಕ್ ಅಧ್ಯಕ್ಷತೆಗೆ ತನ್ನನ್ನು ಪರಿಗಣಿಸಬೇಕೆಂದು ಕೃಷ್ಣ ಪ್ರಸಾದ್ ಆಳ್ವರವರು ಮಾಡಿದ ಮನವಿಯನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಮುನಿಸಿಕೊಂಡಿದ್ದ ಆಳ್ವ ಪಕ್ಷದ ಕಚೇರಿ ಮತ್ತು ಚಟುವಟಿಕೆಯಿಂದ ದೂರ ಉಳಿದಿದ್ದರು. ಈ ಹಿಂದೆ ಬ್ಲಾಕ್ ಕಾಂಗ್ರೆಸ್ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಆಳ್ವ ನೂತನ ಅಧ್ಯಕ್ಷರ ನೇಮಕವಾದ ಬಳಿಕ ಬ್ಲಾಕ್ ಕಾಂಗ್ರೆಸ್ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಈ ನಡುವೆ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಅವರನ್ನು ಭೇಟಿಯಾದ ಆಳ್ವ ಈ ಕುರಿತು ಅವರೊಂದಿಗೆ ಮಾತನಾಡಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಕೃಷ್ಣ ಪ್ರಸಾದ್ ಆಳ್ವ: 18 ವರ್ಷಗಳಿಂದ ಕಾಂಗ್ರೆಸ್ ಪ್ಲಾಗ್ ಅನ್ನು ಹಿಡಿದಂತಹ ವ್ಯಕ್ತಿ ನಾವು, ನಮ್ಮ ತಂದೆಯ ಮತ್ತು ಸುಧಾಕರ್ ಶೆಟ್ಟಿ, ವಿನಯ ಕುಮಾರ್ ಸೊರಕೆಯವರ ಮುಖಾಂತರ ಪ್ರೇರಣೆಗೊಂಡು ಕಾಂಗ್ರೆಸ್ಸಿಗೆ ಪಾದರ್ಪಣೆ ಮಾಡಿದೆವು. ತದನಂತರ ನಿರಂತರವಾಗಿ ಸೊರಕೆ ಅವರ ಜೊತೆ ಸುಧಾಕರ್ ಶೆಟ್ಟಿಯವರ ಜೊತೆ ಹಾಗೂ ಹೇಮನಾಥ್ ಶೆಟ್ಟಿಯವರು ಅಧ್ಯಕ್ಷರಾಗಿರುವಾಗ, ಮಹಮ್ಮದ್ ಬಡಗನ್ನೂರು ರವರು ಅಧ್ಯಕ್ಷರಾಗಿರುವವಾಗ ಅದಲ್ಲದೇ ಶಕುಂತಳಾ ಶೆಟ್ಟಿಯವರು ನಮ್ಮ ಕಾಂಗ್ರೆಸ್ಸಿಗೆ ಕಾಲಿರಿಸಿದ ನಂತರ ಒಂದು ದಿನ ಕೂಡ ವಿರಮಿಸದೆ ನಾವು ಪಕ್ಷದ ಕೆಲಸಗಳನ್ನು ಮಾಡುತ್ತಾ ಬಂದಿದ್ದೇವೆ.
ಮೊನ್ನೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯಲ್ಲಿ ಸ್ವಲ್ಪ ಅಸಮಾಧಾನಗೊಂಡು ದೂರ ಇರಲು ಪ್ರಯತ್ನಿಸಿದ್ದೇ ಆದರೆ ಕಾಂಗ್ರೆಸ್ ಹಿರಿಯ ನಾಯಕರ ಒತ್ತಾಯ ಮತ್ತು ಮನವಿಗೆ ಸ್ಪಂದಿಸಿ ಮತ್ತೆ ಕಾಂಗ್ರೆಸ್ ನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಲು ತೀರ್ಮಾನ ಮಾಡಿದ್ದೇನೆ,ಕಾಂಗ್ರೆಸ್ ಪಕ್ಷ ಜಾತ್ಯಾತೀತ ಪಕ್ಷ ಅದರ ಋಣ ನಮ್ಮ ಮೇಲಿದೆ ಎಂದರು.