ಮಂಗಳೂರು: ನಗರದ ಮೊಬೈಲ್ ಶೋರೂಂ ಒಂದರಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣವನ್ನು ಬೇಧಿಸಿರುವ ಮಂಗಳೂರು ಪೊಲೀಸರು ಓರ್ವ ಆರೋಪಿ ಸಹಿತ 40 ಮೊಬೈಲ್‌ಗಳನ್ನು ಆರೋಪಿಯಿಂದ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರ ಮೂಲದ ಆರೋಪಿಯನ್ನು ಮುಂಬೈನಲ್ಲಿ ಮಂಗಳೂರು ಪೊಲೀಸರು ಬಂಧಿಸಿದ್ದು, ಸುಮಾರು 41 ಲಕ್ಷ ರೂ. ವೌಲ್ಯದ ಕಳವಾದ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಕೆಲ ಸಮಯದ ಹಿಂದೆ ನಗರದ ಆ್ಯಪಲ್ ಶೋಂ ರೂಂನಿಂದ 60 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ 68 ಮೊಬೈಲ್‌ಗಳು ಕಳವಾಗಿರುವುದಾಗಿ ದೂರು ನೀಡಲಾಗಿತ್ತು. ಕಳ್ಳತನಕ್ಕೆ ಕೆಲ ದಿನಗಳ ಮೊದಲೇ ಕಳ್ಳರು ಗ್ರಾಹಕರ ಸೋಗಿನಲ್ಲಿ ಮೊಬೈಲ್ ಶೋಂ ರೂಂಗೆ ತೆರಳಿ, ಅಲ್ಲಿನ ವಾಶ್‌ರೂಂ ಉಪಯೋಗಿಸುವ ನೆಪದಲ್ಲಿ ಅಂಗಡಿ ಪ್ರವೇಶಿಸುವ ದಾರಿಯನ್ನು ಕಂಡುಕೊಂಡಿದ್ದಾರೆ.

ಮುಂಬೈನಿಂದ ರೈಲು ಮೂಲಕ ಬಂದಿದ್ದ ಆರೋಪಿಗಳು, ಕಳವಿನ ಬಳಿಕ ಇಲ್ಲಿಂದ ಉಡುಪಿಗೆ ತೆರಳಿ ಅಲ್ಲಿಂದ ಮುಂಬೈಗೆ ತೆರಳಿದ್ದಾರೆನ್ನಲಾಗಿದೆ. ಈ ಮೊಬೈಲ್ ಅಂಗಡಿಯಲ್ಲಿ ಎರಡು ವರ್ಷದ ಹಿಂದೆಯೂ ಕಳವು ನಡೆದಿತ್ತು. ಈ ಕೃತ್ಯವನ್ನು ಇಬ್ಬರು ಆರೋಪಿಗಳು ಎಸಗಿರುವುದು ಪತ್ತೆಯಾಗಿದ್ದು, ಓರ್ವನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯ ವಿರುದ್ಧ ಮುಂಬೈನಲ್ಲಿ ಕಳ್ಳತನ ಸೇರಿ 9ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕಮಾರ್ ಮಾಹಿತಿ ನೀಡಿದರು.
ಸಿಸಿಬಿ ತಂಡ ಆರೋಪಿಗಳ ಪತ್ತೆಯಲ್ಲಿ ತಂಡದ ರೀತಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ತಂಡಕ್ಕೆ ಪ್ರೋತ್ಸಾಹ ಧನವಾಗಿ 10,000 ರೂ. ನಗದು ಬಹುಮಾನವನ್ನು ಪೊಲೀಸ್ ಆಯುಕ್ತರು ಘೋಷಿಸಿದರು. ಈ ಸಂದರ್ಭ ಡಿಸಿಪಿಗಳಾದ ಹರಿರಾಂ ಶಂಕರ್ ಹಾಗೂ ದಿನೇಶ್ ಕುಮಾರ್ ಉಪಸ್ಥಿತರಿದ್ದರು.