ಮುಕ್ಕೂರು : ಪ್ರಗತಿಪರ ಕೃಷಿಕ, ಮುಕ್ಕೂರು ಅಂಚೆ ಕಚೇರಿಯ ನಿವೃತ್ತ ಅಂಚೆ ಪಾಲಕ ಹಾಗೂ ಬೆಳ್ಳಾರೆ ಸಿ.ಎ.ಬ್ಯಾಂಕ್ ನ ಮಾಜಿ ಅಧ್ಯಕ್ಷ ವಿಠಲ್ ರೈ ಕುಂಜಾಡಿ ಅವರ ಶಿಸ್ತುಬದ್ಧ ವ್ಯಕ್ತಿತ್ವ ಸಮಾಜಕ್ಕೆ ಮಾದರಿ ಎಂದು ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ, ಮುಕ್ಕೂರು- ಕುಂಡಡ್ಕ ನೇಸರ ಯುವಕ ಮಂಡಲ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಹೇಳಿದರು.
ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ದಿ. ವಿಠಲ ರೈ ಕುಂಜಾಡಿ ಅವರಿಗೆ ಆ.22 ರಂದು ಮುಕ್ಕೂರಿನಲ್ಲಿ ನಡೆದ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಊರಿನ ಸರ್ವತೋಮುಖ ಅಭಿವೃದ್ಧಿಗೆ ವಿಠಲ ರೈ ಅವರ ಕೊಡುಗೆ ಅಪಾರ. ಅವರಿಗೆ ಕೆಲಸದ ಮೇಲಿದ್ದ ಶ್ರದ್ಧೆ, ಉತ್ಸಾಹ ಇಂದಿನ ಯುವ ಪೀಳಿಗೆಗೆ ಮಾದರಯಾಗಬೇಕು ಎಂದರು.
ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ ನುಡಿನಮನ ಸಲ್ಲಿಸಿ, ಕಾಯಕವೇ ಕೈಲಾಸ ಎಂದು ನಂಬಿ, ತಾನು ನಂಬಿದ ತತ್ವಗಳಿಗೆ ಹೇಗೆ ಬದ್ಧರಾಗಬೇಕು ಎಂದು ತೋರಿಸಿಕೊಟ್ಟ ಆದರ್ಶ ವ್ಯಕ್ತಿತ್ವ ವಿಠಲ ರೈಯವರದ್ದು. ಕೃಷಿಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಜತೆಗೆ, ಅಲ್ಪ ವೇತನದಲ್ಲಿಯೂ ಅಂಚೆ ಪಾಲಕನ ಕೆಲಸವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿದವರು. ಯಾವುದೇ ಪ್ರತಿಫಲ ಅಪೇಕ್ಷಿಸದೆ ತನಗೆ ದೊರೆತ ಕೆಲಸಗಳಿಗೆ ನ್ಯಾಯ ಒದಗಿಸುತ್ತಿದ್ದವರು ಎಂದರು.
ಬೆಳ್ಳಾರೆ ಸಿ.ಎ ಬ್ಯಾಂಕ್ ಅಧ್ಯಕ್ಷ ಅನಿಲ್ ರೈ ಚಾವಡಿಬಾಗಿಲು ಮಾತನಾಡಿ, ಊರ ಜನರಿಗೆ ಉತ್ತಮ ಮಾರ್ಗದರ್ಶಕರಾಗಿ ಇತರರಿಗೆ ಆದರ್ಶರಾಗಿದ್ದ ವಿಠಲ ರೈ ಅವರು ನಮ್ಮನ್ನಗಲಿರುವುದು ಸಮಾಜಕ್ಕೆ ತುಂಬಲಾರದ ನಷ್ಟ. ಅವರು ಹಾಕಿ ಕೊಟ್ಟ ದಾರಿ ನಮಗೆಲ್ಲ ಮಾದರಿ ಎಂದರು.ಬೆಳ್ಳಾರೆ ಸಿ.ಎ ಬ್ಯಾಂಕ್ ನಿರ್ದೇಶಕ ಶ್ರೀರಾಮ ಪಾಟಾಜೆ ಮಾತನಾಡಿ,ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಇದರ ನಡುವೆ ನಾವು ಸಮಾಜಕ್ಕೆ ಏನು ನೀಡಿದ್ದೇವೆ ಎಂಬುದೇ ಶಾಶ್ವತವಾಗಿರುತ್ತದೆ. ಕನಿಷ್ಟ ಮೂಲ ಸೌಕರ್ಯಗಳು ಇಲ್ಲದ ಕಾಲದಲ್ಲಿ ಊರಿನ ಅಭಿವೃದ್ಧಿಗೆ ಹಗಲಿರುಳು ದುಡಿದ ವಿಠಲ ರೈ ಅವರ ಸೇವೆ ಸ್ಮರಣೀಯ ಎಂದರು.
ಮಂಗಳೂರು ಕ್ರೆಡಿಟ್ ಕೋ – ಅಪರೇಟಿವ್ ಸೊಸೈಟಿಯ ನಿರ್ದೇಶಕ ಕುಂಬ್ರ ದಯಾಕರ ಆಳ್ವ ಮಾತನಾಡಿ, ಕಿರಿಯ ವಯಸ್ಕರನ್ನು ಸಮಕಾಲೀನರಾಗಿ ನೋಡುತಿದ್ದ ಮನೋಭಾವ ವಿಠಲ ರೈಯವರದ್ದು. ಸ್ನೇಹ ಜೀವಿಯಾಗಿ, ಇತರರ ಕಷ್ಟಗಳಿಗೆ ಸ್ಪಂದಿಸುವ ಗುಣ ಅವರದಾಗಿತ್ತು. ಅವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟ ಎಂದರು. ಮುಕ್ಕೂರು ಶಾಲಾ ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಜೈನುದ್ದೀನ್ ತೋಟದಮೂಲೆ ಮಾತನಾಡಿ, ಊರಿನ ಅಭಿವೃದ್ಧಿ ಕೆಲಸಗಳಲ್ಲಿ ವಿಠಲ ರೈ ಅವರ ಪಾತ್ರ ಮಹತ್ವವಾದದ್ದು. ಅವರ ಪರಿಶ್ರಮ ವ್ಯಕ್ತಿತ್ವ ನಮಗೆಲ್ಲ ಆದರ್ಶ ಎಂದರು.
ಮುಕ್ಕೂರು ಅಂಚೆ ಪಾಲಕಿ ಮಮತಾ ವಸಂತ, ನೋಟರಿ ನ್ಯಾಯವಾದಿ ಎ. ಬಾಬು ಗೌಡ ಅವರು ವಿಠಲ್ ರೈ ಅವರ ಕೊಡುಗೆಯನ್ನು ಸ್ಮರಿಸಿದರು. ನಿವೃತ್ತ ಅಂಚೆ ಉದ್ಯೋಗಿ ಪೂವಪ್ಪ ಪೂಜಾರಿ ಮುಕ್ಕೂರು ದೀಪ ಬೆಳಗಿಸಿ ಪುಷ್ಪ ನಮನ ಸಲ್ಲಿಸಿದರು.ಮುಕ್ಕೂರು ಶಾಲಾ ಎಸ್ಡಿಎಂಸಿ ಅಧ್ಯಕ್ಷ ಕುಂಞಣ್ಣ ನಾಯ್ಕ ಅಡ್ಯತಕಂಡ ಬೆಳ್ಳಾರೆ ಸಿ.ಎ. ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಈಶ್ವರ ಆಳ್ವ ನುಡಿನಮನ ಸಲ್ಲಿಸಿದರು.
ವೇದಿಕೆಯಲ್ಲಿ ವಿವೇಕ್ ರೈ ಕುಂಜಾಡಿ ಉಪಸ್ಥಿತರಿದ್ದರು. ಬೃಂದಾ. ಪಿ ಮುಕ್ಕೂರು ಕಾರ್ಯಕ್ರಮ ನಿರೂಪಿಸಿದರು. ಜಯಂತ ಗೌಡ ಕುಂಡಡ್ಕ, ಮಹೇಶ್ ಕುಂಡಡ್ಕ ಸಹಕರಿಸಿದರು.