ಒಬ್ಬ ವ್ಯಕ್ತಿ ಶ್ರೇಷ್ಠ ನಾಯಕನಾಗುವ ಅರ್ಹತೆ, ಜನಪರ-ಜನಸ್ನೇಹಿ ಚಿಂತನೆಗಳಿಗೆ ಬೆಳಕು ಚೆಲ್ಲುವ ಕಾರ್ಯಸ್ವರೋಪ ಮತ್ತು ಸಮಾಜವನ್ನ ಮುನ್ನಡೆಸುವ ಸಾಮರ್ಥ್ಯ ಹೊಂದಿರಬೇಕಾದರೆ ಆತನ ತತ್ವ-ಚಿಂತನೆಗಳು ಉನ್ನವಾಗಿರಬೇಕು. ಆತನ ಧ್ಯೇಯದ ಮೇಲೆ ಬಲವಾದ ನಂಬಿಕೆ ಇರಬೇಕು. ಚಿಂತನೆಗಳನ್ನ ಕಾರ್ಯರೂಪಕ್ಕೆ ತರುವ ಅಧಮ್ಯ ಇಚ್ಛಾಶಕ್ತಿ ಇರಬೇಕು. ಇಂತಹ ಗುಣಗಳನ್ನ ಹೊಂದಿದ ವ್ಯಕ್ತಿ ಮಾತ್ರ ಮುಂದೆ ಗುರುವಾಗಬಲ್ಲ, ಉತ್ತಮ ನಾಯಕನಾಗಬಲ್ಲ. ಈ ಎಲ್ಲಾ ಗುಣಗಳನ್ನು ಹುಟ್ಟಿನಿಂದಲೇ ಮೈಗೂಡಿಸಿಕೊಂಡಿರುವವರು, ಜಾಗತಿಕ ಆಧ್ಯಾತ್ಮ ಸಂತ ಎಂದೇ ಖ್ಯಾತಿ ಪಡೆದಿರುವ ಬ್ರಹ್ಮ ಶ್ರೀ ನಾರಾಯಣ ಗುರುಗಳು. ಪ್ರಸ್ತುತ ವಿದ್ಯಾಮಾನಕ್ಕೆ ಮತ್ತು ಆಧುನಿಕ ಜಗತ್ತಿಗೆ ಗುರುಗಳು ಸಾರಿದ ಸಂದೇಶಗಳು ಅತ್ಯಗತ್ಯ. ಪುರುಷಾರ್ಥದಲ್ಲಿ ಮೋಕ್ಷವನ್ನ ಪಡೆಯಲು ಗುರುಗಳ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅನಿವಾರ್ಯತೆ ಇದ್ದೇ ಇದೆ.
ವಿಸ್ತರಣೆ:-
ಸಾಮ್ರಾಜ್ಯಶಾಹಿ ಬ್ರಿಟಿಷರ ದಬ್ಬಾಳಿಕೆಯಿಂದ ಇಡೀ ದೇಶವೇ ತತ್ತರಿಸುತ್ತಿದ್ದ ಕಾಲ ಒಂದೆಡೆ. ಈ ಸಮಾಜದ ಮೇಲ್ವರ್ಗದವರ ದರ್ಪಕ್ಕೆ ಒಳಗಾದ ಶೋಷಿತರ ಅಸಹಾಯಕತೆಯ ಕಾಲ ಇನ್ನೊಂದೆಡೆ. ಇಂತಹ ಕಾಲಘಟ್ಟದಲ್ಲಿ ಜನಿಸಿದ ಆಧ್ಯಾತ್ಮ ಜ್ಯೋತಿ, ಮಹಾನ್ ಚೇತನ ಬ್ರಹ್ಮಶ್ರೀ ನಾರಾಯಣ ಗುರುಗಳು. ಕೇರಳದ ಚೆಂಬಳಾಂತಿ ಎಂಬ ಗ್ರಾಮದ, ಬಡ-ಕೃಷಿ ಕುಟುಂಬದವರಾದ ಮದನ್ ಹಾಸನ್ ಮತ್ತು ಕುಟ್ಟಿ ಅಮ್ಮಾಳ್ ಎಂಬ ದಂಪತಿಗಳಿಗೆ ಮಗನಾಗಿ ಜನಿಸಿದರು. ಎಲ್ಲರೂ ಸೇರಿ ಪ್ರೀತಿಯಿಂದ ‘ನಾಣು’ಎಂದು ಹೆಸರಿಟ್ಟರು. ನಾಣು ಚಿಕ್ಕಂದಿನಿಂದಲೇ ಪ್ರತಿ ವಿಚಾರಗಳನ್ನ ಗಂಭೀರವಾಗಿ ಯೋಚಿಸುತ್ತಾ ತುಂಟಾಟ ಮಾಡುತ್ತಿದ್ದರು. ಪೂಜೆಗಾಗಿ ತೆಗೆದಿಟ್ಟ ಹಣ್ಣುಗಳನ್ನು ತಿಂದುಬಿಡುತ್ತಿದ್ದರು. ಹಿರಿಯರು ಗದರಿಸಿದಾಗ… ಹಣ್ಣು ತಿಂದು ನಾನು ಸಂತೋಷಪಟ್ಟರೆ ಅದು ದೇವರಿಗೆ ತಲುಪಿದಂತೆ ಆಗುವುದಿಲ್ಲವೇ…? ಎನ್ನುತ್ತಿದ್ದರು. ಸಣ್ಣ ಮಕ್ಕಳಲ್ಲಿ ದೇವರನ್ನು ಕಾಣಬೇಕು ಎಂಬ ವಿಚಾರವನ್ನು ಅರ್ಥೈಸಿಕೊಂಡಿದ್ದ ನಾಣುವಿನ ಬುದ್ಧಿಶಕ್ತಿ ಅಪಾರ.
ಮೇಲ್ವರ್ಗದವರ ಕಟ್ಟುನಿಟ್ಟಿನ ಕ್ರಮಗಳನ್ನು ಅರ್ಥೈಸಲಾಗಿದೆ, ಮಡಿ-ಮೈಲಿಗೆ ಎಂದರೆ ಏನೆಂದು ಪ್ರಶ್ನಿಸುತ್ತಿದ್ದರು. ನಾವೇಕೆ ಅಸ್ಪೃಶ್ಯರನ್ನು ಮುಟ್ಟಿ ಕೊಳ್ಳಬಾರದೆಂದು ಕೇಳುತ್ತಿದ್ದರು. ಅಸ್ಪೃಶ್ಯರನ್ನು ಮುಟ್ಟಿ ಮಡಿ ಮಡಿ ಎಂದು ಹಾರಾಡುತ್ತಿದ್ದವರನ್ನೇ ಮುಟ್ಟಿ ಕೈ ಚಪ್ಪಾಳೆ ತಟ್ಟಿ ಕುಣಿಯುತ್ತಿದ್ದರು. ನಾಣುವಿಗೆ ಸನ್ಯಾಸಿಗಳೆಂದರೆ ಅಪಾರ ಗೌರವ. ಒಮ್ಮೆ ಅವರು ಇತರ ಬಾಲಕರೊಂದಿಗೆ ಶಾಲೆಯಿಂದ ಹಿಂತಿರುಗುತ್ತಿದ್ದಾಗ, ದಾರಿಯಲ್ಲಿ ಸನ್ಯಾಸಿಯೊಬ್ಬರು ಎದುರಾಗುತ್ತಾರೆ. ಅವರ ಕಾವಿ ಬಟ್ಟೆಯನ್ನು, ಉದ್ದ ಗಡ್ಡವನ್ನೂ ನೋಡಿ ಇತರೆ ಬಾಲಕರು ಸನ್ಯಾಸಿಯನ್ನ ಹಾಸ್ಯಮಾಡುತ್ತಾ ಕಲ್ಲಿನಿಂದ ಹೊಡೆಯಲು ಆರಂಭಿಸಿದರು. ಅದನ್ನು ಕಂಡ ನಾಣುವಿಗೆ ತುಂಬಾ ದುಃಖವಾಯಿತು. ಅವರೆಷ್ಟೇ ಬೇಡವೆಂದರೂ ಇತರ ಬಾಲಕರು ಕೇಳಲಿಲ್ಲ. ಬಾಲಕರ ನಡೆಯನ್ನ ಅಲ್ಲೇ ವಿರೋಧಿಸಿದರು. ಆಗಾಗಲೇ ಅವರು ಅಹಿಂಸಾ ಮಾರ್ಗವನ್ನು ತನ್ನಲ್ಲಿ ಬೆಳೆಸಿಕೊಂಡಾಗಿತ್ತು. ದುಃಖ ತಡೆಯಲಾರದೆ ನಾಣು ಜೋರಾಗಿ ಬಿಕ್ಕಿಬಿಕ್ಕಿ ಅತ್ತುಬಿಟ್ಟರು. ಆ ಹುಡುಗರು ಸನ್ಯಾಸಿಗೆ ಹೊಡೆಯುವುದನ್ನು ನಿಲ್ಲಿಸಿ ತಮ್ಮ ಪಾಡಿಗೆ ಏನೋ ಸಾಧನೆಗೈದಂತೆ ಆನಂದಿಸಿ ಮನೆಗೆ ಹೊರಟುಬಿಟ್ಟರು. ಇವೆಲ್ಲವನ್ನು ಗಮನಿಸಿದ ಸನ್ಯಾಸಿಯೇ ಸ್ವತಃ ನಾಣುವನ್ನು ಸಂತೈಸಿದರು. ನಾಣುವಿನ ಹೆಸರನ್ನು ಕೇಳಿ ಆಶೀರ್ವಾದವನ್ನು ಮಾಡಿದರು. ಇವೆಲ್ಲಾ ಸಣ್ಣ ಘಟನೆಯಾಗಿರಬಹುದು ಆದರೆ ಇದರಿಂದ ಪಡೆಯಬೇಕಾದದ್ದು ಅಪಾರ. ಅಷ್ಟಲ್ಲದೆ ನಾಣು ಸಣ್ಣ ವಯಸ್ಸಿನಿಂದಲೇ ತನ್ನ ತಂದೆಯವರಿಂದ ರಾಮಾಯಣ ಮಹಾಭಾರತದ ಕಥೆಗಳನ್ನು, ಗೀತೆಯ ಉಪದೇಶವನ್ನು ಕೇಳಿಸಿಕೊಳ್ಳುತ್ತಿದ್ದರು. ಸಂಸ್ಕೃತ ಅಧ್ಯಯನವೆಂದರೆ ಅವರು ಬಲು ಇಷ್ಟಪಡುತ್ತಿದ್ದ ಸಮಯವಾಗಿತ್ತು.
ಇಂದಿನ ಮಕ್ಕಳಿಗೆ ಯಾವ ರೀತಿಯ ಸಂಸ್ಕಾರವನ್ನು ಕಲಿಸುತ್ತಿದ್ದೇವೆ ಎಂಬುದನ್ನು ನಾವು ಮನವರಿಕೆ ಮಾಡಿಕೊಳ್ಳಬೇಕು. ” ಬಾಲ್ಯ ಕೇವಲ ಆನಂದಕ್ಕಲ್ಲ, ಅದು ಜ್ಞಾನಾಭಿವೃದ್ಧಿಯ ಪರ್ವಕಾಲ” ಎಂಬುದನ್ನು ನಾಣು ನಂಬಿದ್ದರು. ಆದರೆ ಇಂದಿನ ಶಿಕ್ಷಣ ಪದ್ಧತಿಗಳು ವ್ಯಾವಹಾರಿಕವಾಗಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಇಂದಿನ ಮಕ್ಕಳು ಇನ್ನೊಬ್ಬನನ್ನ ಹಿಂಸಿಸಿ,ನೋವುಂಟುಮಾಡಿ,ಅವಮಾನಿಸಿ ಸಾಧನೆ ಮಾಡಿದವರಂತೆ ಆನಂದ ಪಡೆದುಕೊಳ್ಳುತ್ತಾರೆ. ಶಾಲಾ-ಕಾಲೇಜಿನ ದಿನಗಳನ್ನು ಮೋಜು-ಮಸ್ತಿಯಿಂದ ಕಳೆಯುತ್ತಿದ್ದಾರೆ. ಆದರೆ ಅದೇ ವಯೋಮಾನದಲ್ಲಿ ಹಿಂಸೆಯನ್ನು ವಿರೋಧಿಸಿ, “ಅಹಿಂಸಾ ಪರಮೋ ಧರ್ಮ” ಎನ್ನುತ್ತಾ ಸತ್ಯದ ಮಾರ್ಗ ಹಿಡಿದು,ಬಾಲ್ಯದ ದಿನಗಳನ್ನು ಜ್ಞಾನಾರ್ಜನೆಗಾಗಿ ವ್ಯಯಿಸಿದರು. ನಾಣುವಿನಂತಹ ಯುವಕರು ಮಾತ್ರ ಸಮಾಜವನ್ನು ಮುನ್ನಡೆಸುವ ಗುರು ಆಗಬಲ್ಲರು ಎನ್ನುವುದಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳೇ ಸಾಕ್ಷಿ. ಇಡೀಯ ವಿದ್ಯಾರ್ಥಿ ಸಮುದಾಯಕ್ಕೂ ಅವರ ಜೀವನ ಆದರ್ಶ ಎಂಬುದಕ್ಕೆ ಮೇಲಿನ ಉದಾಹರಣೆಗಳೇ ಸಾಕ್ಷಿ.
ಒಮ್ಮೆ ಸ್ವಾಮಿ ವಿವೇಕಾನಂದರು ಕೇರಳಕ್ಕೆ ಭೇಟಿ ಕೊಟ್ಟ ಸಂದರ್ಭ. ಇಡೀ ಕೇರಳವನ್ನು ತಿರುಗಾಡಿದ ಸ್ವಾಮೀಜಿ ದೇವರ ನಾಡು ಎಂದೆನಿಸಿಕೊಳ್ಳುವ ಕೇರಳದಲ್ಲಿ ಮೇಲ್ವರ್ಗದವರ ಶೋಷಣೆ ಪ್ರಮಾಣವನ್ನು ಕಂಡು ಇದು ದರಿದ್ರರ ನಾಡು, ಮೂರ್ಖರ ನಾಡು ಎಂದು ಕರೆದು ಹೋಗುತ್ತಾರೆ. ಕೇರಳ ಬೇಟಿಯ ನಂತರ ಸ್ವಾಮೀಜಿ “ದರಿದ್ರ ದೇವೋಭವ, ಮೂರ್ಖ ದೇವೋಭವ” ಎಂಬ ವಾಕ್ಯಗಳೆರಡನ್ನು ಸೇರಿಸಿಕೊಳ್ಳುತ್ತಾರೆ. ಸ್ವಾಮೀಜಿಯ ಈ ಮಾತಿನಿಂದ ಸಮಾಜದಲ್ಲಿ ಶೋಷಣೆಯನ್ನು ಮಾಡುವ ದರಿದ್ರರು ಮತ್ತು ಆ ನೀತಿಯ ವಿರುದ್ಧ ಧ್ವನಿ ಎತ್ತದ, ಶೋಷಣೆಗೊಳಗಾದ ಮೂರ್ಖರ ಪ್ರಮಾಣ ಎಷ್ಟಿತ್ತು ಎಂಬುದನ್ನು ಅರಿಯಬಹುದು. ಅಂತಹ ಕಾಲಘಟ್ಟದಲ್ಲಿ ಮಿಂಚಿನಂತೆ ತನ್ನ ಬುದ್ಧಿಶಕ್ತಿಯಿಂದ ಸಮಾಜ ಸುಧಾರಣೆಗೆ ಹೆಜ್ಜೆಯಿಟ್ಟವರು ಬ್ರಹ್ಮ ಶ್ರೀ ನಾರಾಯಣ ಗುರುಗಳು. ತನಗರಿಯದಂತೆ ಮನೆಯಲ್ಲಿ ಮದುವೆ ನಿಶ್ಚಯಿಸಿರುತ್ತಾರೆ. ವಧುವನ್ನು ತನ್ನ ಮನೆಗೆ ಕರೆತರುವವರೆಗೂ ಗುರುಗಳಿಗೆ ವಿಚಾರ ತಿಳಿದಿರುವುದಿಲ್ಲ. ಅಲ್ಲಿನ ಒಂದು ಪದ್ಧತಿಯ ಪ್ರಕಾರ, ವರನ ಅಕ್ಕ ವಧುವಿಗೆ ಶಾಸ್ತ್ರೋಕ್ತವಾಗಿ ಸೀರೆಯನ್ನು ಕೊಟ್ಟು, ತಿಲಕವನ್ನು ಇಟ್ಟರೆ ಅದು ಮದುವೆಯಾದಂತೆ ಎಂಬ ಸಂಪ್ರದಾಯ ಆಚರಿಸುತ್ತಿದ್ದರು. ತನಗೆ ಅರಿಯದೆ, ತನ್ನ ಒಪ್ಪಿಗೆಯಿಲ್ಲದೆ, ತನಗೆ ಇಷ್ಟವಿಲ್ಲದ ವಿವಾಹವನ್ನು ನಾನು ಎಂದಿಗೂ ಸಮ್ಮತಿಸುವುದಿಲ್ಲ ಎಂದು ಅದನ್ನು ಖಂಡಿಸುತ್ತಾರೆ. ” ವಿವಾಹವೆಂಬುದು ಎರಡು ಪವಿತ್ರ ಹೃದಯಗಳ ಬಂಧನ ” ಎಂಬ ಸಂದೇಶವನ್ನು ಸಾರುತ್ತಾರೆ. ಗುರುಗಳು ತನ್ನ ಹೆಂಡತಿಯ ಬಳಿ.. “ನಾವು ಯಾವುದೋ ಕಾರ್ಯಸಾಧನೆಗಾಗಿ ಈ ಭೂಮಿಯಲ್ಲಿ ಜನ್ಮ ಪಡೆದಿದ್ದೇವೆ. ನನಗೆ ನನ್ನದೇ ಆದ ಕಾರ್ಯಗಳಿವೆ, ನಿನಗೆ ನಿನ್ನದೇ ಆದ ಕಾರ್ಯಗಳಿವೆ. ನಾನು ನನ್ನ ದಾರಿಯಲ್ಲಿ ಸಾಗುತ್ತೇನೆ, ನೀನು ನಿನ್ನ ದಾರಿಯಲ್ಲಿ ಮುಂದುವರಿ”. ಎನ್ನುತ್ತಾ ಸಂಸಾರ ಜೀವನ ತ್ಯಜಿಸಿ, ತ್ಯಾಗ ಜೀವನವನ್ನು ಅಪ್ಪಿಕೊಂಡು, ಸನ್ಯಾಸತ್ವದೆಡೆಗೆ ಹೆಜ್ಜೆಯನ್ನಿಡುತ್ತಾರೆ.
ತಪಸ್ಸು,ಚಿಂತನೆ,ಏಕಾಗ್ರತೆ,ಶ್ರದ್ಧೆ ಮತ್ತು ಭಕ್ತಿಮಾರ್ಗದಿಂದ ಜ್ಞಾನವನ್ನು ಸಂಪಾದಿಸಿಸುತ್ತಾರೆ. ” ದೇವರ ಸೇವೆ ಮಾಡಿದರೆ, ತನ್ನದೊಬ್ಬನದೇ ಏಳಿಗೆ, ಉದ್ಧಾರವಾಗಬಹುದು, ಆದರೆ ದೇಶ ಸೇವೆ ಮಾಡಿದರೆ ಮಾಡಿದರೆ ಹಲವರ ಕಲ್ಯಾಣ ನಿಶ್ಚಯ ” ಎಂದ ಗುರುಗಳು ದೇಶಸೇವೆಯ ಕಾಯಕದಲ್ಲಿ ತೊಡಗಿಸಿಕೊಂಡರು. ಇಂದಿನ ವಿದ್ಯಾಮಾನದಲ್ಲಿ ಜ್ಞಾನ ಸಂಪಾದನೆಯೇ ಧನ ಸಂಪಾದನೆಯ ಮೂಲ ಎಂದು ತಿಳಿದುಬಿಟ್ಟಿದ್ದಾರೆ. ಅಂತಹವರು ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಅರಿತು ಸ್ವಾರ್ಥವನ್ನ ಮರೆಯಬೇಕಿದೆ. ಈ ರೀತಿಯ ವಿಚಾರಗಳಿಗೆಂದೇ ಗುರುಗಳು ” ಜ್ಞಾನದಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಿಷ್ಠರಾಗಿ ” ಎಂಬ ಕರೆಯನ್ನು ಕೊಟ್ಟಿರುತ್ತಾರೆ. ” ಎಲ್ಲಿಯವರೆಗೆ ನೀವು ಜ್ಞಾನ ಸಂಪಾದಿಸುವುದಿಲ್ಲವೋ, ಅಲ್ಲಿಯತನಕ ನೀವು ಗುಲಾಮರಾಗಿರುವಿರಿ ” ಎಂಬ ಗುರುಗಳ ಮಾತು ಜೀವನದಲ್ಲಿ ಅನುಭವ ಪಡೆದಾಗಲೇ ಸತ್ಯ ಎಂದೆನಿಸಿ ಕೊಳ್ಳುವುದು.
*ಕೇರಳದಲ್ಲಿ ಪ್ರಥಮವಾಗಿ ಮಹಿಳಾ ಸಮಾನತೆಯ ಪರವಾಗಿ ಧ್ವನಿಯೆತ್ತಿ “ಮಹಿಳೆ ಅಬಲೆಯಲ್ಲ, ಆಕೆ ಸಬಲೆ” ಎನ್ನುತ್ತಾ ಮಹಿಳೆಯರ ಪಾಲಿನ ಜ್ಯೋತಿ ಯಾದರು.
*ಅರ್ಥಹೀನವಾದ ಬಾಲ್ಯವಿವಾಹವನ್ನು ಖಂಡಿಸಿ ಬದುಕಿನ ಸ್ಪಷ್ಟ ಸಂಸಾರ ಮಾರ್ಗವನ್ನು ತಿಳಿಸಿಕೊಡುತ್ತಾರೆ.
*ಅನಿಷ್ಟ ಪದ್ಧತಿಗಳಲ್ಲಿ ಒಂದಾದ ‘ತಾಳಿಕಟ್ಟುಮ್’ ಎಂಬ ಸಂಪ್ರದಾಯ ವಿರೋಧಿಸಿ ಜನರಿಗೆ ಅದರ ಕೆಡುಕುಗಳನ್ನು ವಿವರಿಸುತ್ತಾರೆ.
*ದುಂದುವೆಚ್ಚದ ಮದುವೆ,ಸಮಾರಂಭಗಳನ್ನು ವಿರೋಧಿಸಿ ಸರಳ,ಸಂಪ್ರದಾಯಯುಕ್ತ ಆಚರಣೆಯನ್ನು ನಡೆಸಲು ಕರೆ ಕೊಡುತ್ತಾರೆ.
*ಮದ್ಯಪಾನದ ನಶೆಯಿಂದಾಗಿ ತನ್ನ ಜವಾಬ್ದಾರಿಯನ್ನು ಮರೆತಿದ್ದ ಅಸಂಖ್ಯಾತ ಯುವಕರಿಗೆ ಆಣೆ,ಪ್ರಮಾಣ ಮಾಡಿಸುವ ಮೂಲಕ ಮಧ್ಯಪಾನ ತ್ಯಜಿಸುವಂತೆ ಕರೆ ನೀಡುತ್ತಾರೆ. ಈ ಮೂಲಕ ಜೀವನದ ಗುರಿ ಮತ್ತು ಉದ್ದೇಶಗಳನ್ನು ಯುವಕರಿಗೆ ತಲುಪಿಸಿ ಗ್ರಾಮೀಣ ಮಹಿಳೆಯರ ಬದುಕಿನ ಆಶಾಕಿರಣವಾದರು.
*ಕೆಳ ಕೆಲವರ್ಗದ ಜನರಿಗೆ ಪೂಜೆ ಮಾಡಲು ಅವಕಾಶವಿಲ್ಲ,ಮಂದಿರ ಪ್ರವೇಶಕ್ಕೆ ಅವಕಾಶವಿಲ್ಲ ಎಂಬುದನ್ನು ಅರಿತ ಗುರುಗಳು “ನಾವು ಸೃಷ್ಟಿಸಿರುವುದೇ ದೇವರು, ಭಕ್ತನ ಭಕ್ತಿಗೆ ಆತ ಮೆಚ್ಚದಿರುವನೇ..,ನಿತ್ಯ ಪೂಜೆ ನಡೆಯಲಿ ಸಾವಿರ ಕೈಗಳಿಂದ, ಭಕ್ತಿಯ ಹೃದಯಗಳಿಂದ ” ಎನ್ನುತ್ತಾ ಶಿವಲಿಂಗವನ್ನು ಸ್ಥಾಪಿಸುತ್ತಾರೆ.
*ಗುರುಗಳ ಈ ನಿರ್ಧಾರವನ್ನು ಖಂಡಿಸಿದ ಮೇಲ್ವರ್ಗದ ಜನರು, ಗುರುಗಳ ಮೇಲೆ ಮಾತಿನ ಕಿಡಿಯನ್ನು ಸವರುತ್ತಾರೆ. ಎಲ್ಲದಕ್ಕೂ ಶಾಂತವಾಗಿ ಉತ್ತರಿಸಿದ ಗುರುಗಳು, ” ನಾವು ಎಂದಿಗೂ ದೇವಸ್ಥಾನಕ್ಕೆ ಪ್ರವೇಶ ಕೇಳುವುದಿಲ್ಲ, ಇದು ನಮ್ಮ ಶಿವ” ಎನ್ನುವ ಶಾಂತಿಯ ಉತ್ತರದೊಂದಿಗೆ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತಾರೆ.
*ಪ್ರತಿಯೊಬ್ಬ ವ್ಯಕ್ತಿಗೂ ಲಿಂಗವನ್ನು ಪೂಜಿಸುವ ಅಧಿಕಾರ ಕೊಟ್ಟ ಜಗತ್ತಿನ ಏಕೈಕ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳು.
*ಶೋಷಿತ ವರ್ಗಗಳೆಲ್ಲವನ್ನೂ ಒಟ್ಟು ಸೇರಿಸಿ, ಜಗತ್ತಿನ ಪ್ರಪ್ರಥಮ ಪ್ರಯೋಗದಂತೆ ಮಿಶ್ರ ಭೋಜನವನ್ನು ನಡೆಸಿದ ಏಕೈಕ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳು.
*ಗುರುಗಳು “ಪರೋಪಕಾರವೇ ತನ್ನ ಜೀವನದ ಧ್ಯೇಯ ಎನ್ನುತ್ತಾ” ಸಮಾಜದ ಎಲ್ಲಾ ಧರ್ಮದವರನ್ನು ಒಟ್ಟು ಸೇರಿಸಿ ” ಸರ್ವಧರ್ಮ ಸಮ್ಮೇಳನ” ನಡೆಸುವಲ್ಲಿಯೂ ಯಶಸ್ವಿಯಾಗುತ್ತಾರೆ. ಮುಂದಿನ ಜನಾಂಗಕ್ಕೂ ಇದರ ಮಹತ್ವ ತಿಳಿಯಬೇಕೆಂಬುದರ ಬಯಕೆಯೊಂದಿಗೆ ಭವಿಷ್ಯದ ಚಿಂತನೆಯನ್ನು ಅಂದೇ ರೂಪಿಸಿ ಬಿಟ್ಟಿದ್ದರು. *ಸುಮಾರು 60 ದೇವಸ್ಥಾನಗಳನ್ನು ನಿರ್ಮಿಸಿದ ಬಳಿಕ ಕೆಲವು ಕಡೆ ಕನ್ನಡಿಗಳನ್ನು ಖರೀದಿಸಿ,ಸ್ಥಾಪಿಸಿದ ಗುರುಗಳು ” ಲಿಂಗವನ್ನು ಪೂಜಿಸುವುದು ಧರ್ಮವಾದರೆ, ನಿಮ್ಮ ಅಂತರಾಳವನ್ನು ಅರಿತುಕೊಳ್ಳಿ, ಹೃದಯದ ಬಾಗಿಲು ತೆರೆಯಿರಿ, ನಿಮ್ಮ ಮನಸ್ಸಿನಲ್ಲಿ ಭಗವಂತನನ್ನು ಪ್ರತಿಷ್ಠಾಪಿಸಿ, ಅದನ್ನ ಕಂಡು ಭಕ್ತಿಯಿಂದ ಆನಂದಿಸಿ” ಎಂಬ ಆಧ್ಯಾತ್ಮಿಕ ಅದ್ಭುತ ಸಂದೇಶ ಬ್ರಹ್ಮಶ್ರೀ ನಾರಾಯಣ ಗುರುಗಳಂತಹ ಮಹಾತ್ಮರಿಂದ ಮಾತ್ರ ಹೊರಬರಲು ಸಾಧ್ಯ.
ಕೇರಳದಲ್ಲಿ ಹುಟ್ಟಿ, ಕೇರಳದಲ್ಲಿ ಬೆಳೆದು,ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿ ಸಮಾಜ ಸುಧಾರಣೆಯ ಮೂಲಕ ಇಡೀ ಪ್ರಪಂಚಕ್ಕೆ ಬೆಳಕಾದ ಬ್ರಹ್ಮಶ್ರೀ ನಾರಾಯಣ ಗುರುಗಳು ತಾನು ಬಿಲ್ಲವ ಎಂದು ಎಲ್ಲಿಯೂ ಹೇಳಿಕೊಂಡವರಲ್ಲ. “ಒಂದೇ ಮತ,ಒಂದೇ ಧರ್ಮ, ಒಂದೇ ದೇವರು” ಎಂಬ ಸಾರ್ವಕಾಲಿಕ ಸತ್ಯದ ಸಂದೇಶವನ್ನು ಸಾರಿರುವುದು “ಬಿಲ್ಲವ ಸಮಾಜಕ್ಕೆ ಮಾತ್ರವಲ್ಲ ಅದು ಮಾನವ ಸಮಾಜಕ್ಕೆ”.
ಒಂದು ರಾಷ್ಟ್ರ ಬಲಿಷ್ಠವಾಗಬೇಕಾದರೆ ” ಜ್ಞಾನ,ಶಿಕ್ಷಣ, ಸಂಘಟನೆ,ಆಧ್ಯಾತ್ಮಿಕ ಜಾಗೃತಿ,ಸಾಮಾಜಿಕ ಬದ್ಧತೆ” ಪ್ರತಿಯೊಬ್ಬನಲ್ಲಿರಬೇಕು ಎಂದು ಗುರುಗಳು ಸಾರಿದ ಪಂಚತತ್ವಗಳು ಯಾವುದೋ ಒಂದು ಜಾತಿಗಾಗಿ ಅಲ್ಲ. ಅದು ಸಮಾಜಕ್ಕಾಗಿ, ನಾಡಿನ ಒಳಿತಿಗಾಗಿ. ” ಕೊಂದು ಬದುಕುವುದು ಬದುಕಲ್ಲ, ಇನ್ನೊಬ್ಬನನ್ನು ಉಳಿಸಿ ಬದುಕುವುದು ಬದುಕು” ಎಂಬ, ಗುರುಗಳ ಅಹಿಂಸಾ ತತ್ವಗಳು “ಸಮಾಜ ಕಲ್ಯಾಣಕ್ಕಾಗಿ”ಯೇ ಹೊರತು ಯಾವುದೋ ಜಾತಿಯ ಓಲೈಕೆಗಾಗಿ ಖಂಡಿತ ಅಲ್ಲ. “ಮಣ್ಣಿಗೆ, ನೀರಿಗೆ, ಗಾಳಿಗೆ, ಬೆಂಕಿಗೆ, ಬೆಳಕಿಗೆ ಜಾತಿ ಇಲ್ಲವೆಂದಾಗ ಮೇಲೆ ನಮಗ್ಯಾಕೆ ಜಾತಿ..?” ಬ್ರಾಹ್ಮಣ, ಬಂಟ, ಬಿಲ್ಲವ,ವಿಶ್ವಕರ್ಮ ಏನಾದರಾಗು, ಮೊದಲು ಮಾನವೀಯತೆಯ ಮಾನವನಾಗು ಎನ್ನುತ್ತಾ ಜಾತಿವ್ಯವಸ್ಥೆಯ ಕಟು ವಿರೋಧಿಯಾಗಿದ್ದರು ಬ್ರಹ್ಮಶ್ರೀ ನಾರಾಯಣ ಗುರುಗಳು. ಇಂದು ಗುರುಗಳು ಕೇವಲ ಹಿಂದೂಗಳಿಗೆ ಮಾತ್ರ ಗುರುವಲ್ಲ, ಮುಸಲ್ಮಾನರಲ್ಲಿ ಕ್ರೈಸ್ತರಲ್ಲಿ ನಾರಾಯಣ ಗುರುಗಳನ್ನು ಆರಾಧಿಸುವ, ಪೂಜಿಸುವ, ಅನುಸರಿಸುವ, ಅಧ್ಯಯನ ನಡೆಸುವ ಶ್ರದ್ಧೆಯ ಜನರಿದ್ದಾರೆ ಎಂಬುದನ್ನು ನಾವು ಮರೆಯುವಂತಿಲ್ಲ.
ಇಂದು ನಾವುಗಳು ಗುರುಗಳನ್ನು ಒಂದು ಜಾತಿಗೆ ಬಂಧಿಸಿದರೆ ಸಮಾಜದ ಭಾವನೆಗಳನ್ನ ಕಟ್ಟಿ ಹಾಕಿದಂತೆ. ಗುರುಗಳ ತತ್ವ-ನಡೆಗಳನ್ನ ಸಂಕುಚಿತಗೊಳಿಸಿದಂತೆ. ಗುರುಗಳ ಸಂದೇಶ ಜಾತಿ-ಧರ್ಮಗಳನ್ನು ಮೀರಿರುವಂತದ್ದು. ಮಾನವ ಸಮಾಜದ ಕಲ್ಯಾಣಕ್ಕಾಗಿ ದಾರಿಯನ್ನು ತೋರಿಸಿರುವಂತದ್ದು.
ಆಸೆ,ದುರಾಸೆ,ಮೋಸ,ವಂಚನೆ,ಸುಳ್ಳುಗಳೇ ತುಂಬಿರುವ ಈ ಪ್ರಪಂಚಕ್ಕೆ ಗುರುಗಳ ಸಂದೇಶ ಅನಿವಾರ್ಯವಾದದ್ದು. ಅಧಿಕಾರ, ಹಣದ ವ್ಯಾಮೋಹ, ಪ್ರಸಿದ್ಧಿಯ ಅಮಲಿನಲ್ಲಿ ದುರಾಡಳಿತ ತೋರುವ ಅಧಿಕಾರ ಶಾಹಿಗಳಿಗೂ ಗುರುಗಳು ಸಂದೇಶ ತಲುಪಿಸಿ, ಜಾಗೃತಿಯನ್ನ ಬಡಿದೆಬ್ಬಿಸಬೇಕಿದೆ. ಈ ಸಮಾಜಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ, “ದೇಶ ಸೇವೆಯೇ ಈಶ ಸೇವೆ” ಎನ್ನುತ್ತಾ, ಅಸಂಖ್ಯಾತ ಜನರ ನೋವಿಗೆ ಸ್ಪಂದಿಸಿದ ಗುರುಗಳು ಎಂದು ಅಧಿಕಾರ ಬಯಸಲಿಲ್ಲ. ಹಣದ ವ್ಯಾಮೋಹವಿರಲಿಲ್ಲ. ಪ್ರಸಿದ್ಧಿ ಪಡೆಯುವ ಬಯಕೆ ಒಂದಿಂಚು ಇರಲಿಲ್ಲ. ಲಾಭಗಳಿಸುವ ಉದ್ದೇಶವನ್ನು ಕನಸಲ್ಲೂ ಯೋಚಿಸಿದವರಲ್ಲ. ” ನನ್ನ ಉದ್ದೇಶ ತ್ಯಾಗ ಮತ್ತು ಸೇವೆಯಿಂದ ಪೂರ್ಣಗೊಳ್ಳುವುದು” ಎಂದ ಬ್ರಹ್ಮಶ್ರೀ ನಾರಾಯಣ ಗುರುಗಳಲ್ಲದೆ ಇನ್ನಾರ ಉದಾಹರಣೆಯನ್ನು ಜೀವನದಲ್ಲಿ ಅಳವಡಿಸಲು ಸಾಧ್ಯ..
✍️ ಪೃಥ್ವಿಶ್ ಧರ್ಮಸ್ಥಳ