ಪುತ್ತೂರು: 27 ವರ್ಷಗಳ ಹಿಂದೆ ಮದುವೆ ವಿಚಾರಕ್ಕೆ ಸಂಬಂಧಿಸಿ ಹಲ್ಲೆ ಪ್ರಕರಣವೊಂದರಲ್ಲಿ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡ ನರಿಮೊಗರಿನ ಅಳಿಕೆಮನೆ ನಿವಾಸಿ ಟಿ.ಕೆ ಮೊಹಮ್ಮದ್ ನನ್ನು ಪುತ್ತೂರು ನಗರ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೂಲತಃ ನರಿಮೊಗರು ಅಳಿಕೆಮನೆ ನಿವಾಸಿ ಪ್ರಸ್ತುತ ಸುರತ್ಕಲ್ ಕೃಷ್ಣಾಪುರ ನಿವಾಸಿ ಟಿ.ಕೆ ಮೊಹಮ್ಮದ್ ಬಂಧಿತ ಆರೋಪಿ. ಆರೋಪಿಯನ್ನು ಚಾರ್ಮಾಡಿಯ ತೋಟತ್ತಡಿಯಲ್ಲಿ ಬಂಧಿಸಲಾಗಿದೆ.

ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರು, ದ.ಕ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರು , ಪೊಲೀಸ್ ಉಪಾಧೀಕ್ಷಕರು ಪುತ್ತೂರು ರವರ ಮಾರ್ಗದರ್ಶನದಂತೆ, ಪುತ್ತೂರು ನಗರ ಠಾಣೆಯ ಪೊಲೀಸ್ ನಿರೀಕ್ಷಕರಾದ ಗೋಪಾಲ ನಾಯ್ಕ್ ಮತ್ತು ಪೊಲೀಸ್ ಉಪ ನಿರೀಕ್ಷಕರಾದ ಸುತೇಶ್ ಮತ್ತು ನಸ್ರೀನ್ ತಾಜ್ ಚಟ್ಟರಕಿ ಇವರ ಸೂಚನೆಯಂತೆ ಹೆಡ್ ಕಾನ್ ಸ್ಟೇಬಲ್ ಪರಮೇಶ್ವರ ಮತ್ತು ಕಿರಣ್ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
1994 ರ ಅ.21 ರಂದು ಟಿ ಕೆ ಮೊಹಮ್ಮದ್ ಅವರು ನರಿಮೊಗ್ರು ಗ್ರಾಮದ ಮುಕ್ವೆಯ ಕಾಳಿಕಾಂಬ ಜ್ಯುವೆಲ್ಲರಿ ಅಂಗಡಿಯ ಎದುರುಗಡೆ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಅಪಪ್ರಚಾರ ಮಾಡಿದ ಬಗ್ಗೆ ಮಾತಿಗೆ ಮಾತು ಬೆಳೆದು ಪೂರ್ವದ್ವೇಶದಿಂದ ಅಲ್ಲೇ ಬಿದ್ದಿದ್ದ ಬೊಡ್ರಾಸ್ ಜಲ್ಲಿ ಕಲ್ಲಿನಿಂದ ಆರೋಪಿಯು ಮಹಮ್ಮದ್ ಅವರ ಎಡ ದವಡೆಗೆ ಗುದ್ದಿ ತೀವ್ರ ಸ್ವರೂಪದ ರಕ್ತಗಾಯವನ್ನುಂಟು ಮಾಡಿರುವುದಾಗಿದೆ. ಆರೋಪಿಯು ದಸ್ತಗಿರಿಯಾಗಿ ಮಾನ್ಯ ನ್ಯಾಯಾಲಕ್ಕೆ ಹಾಜರಾಗಿ ನಂತರದ ದಿನಗಳಲ್ಲಿ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದರು.ಸದ್ರಿ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯವು ಆರೋಪಿಯ ವಿರುದ್ಧ ದಸ್ತಗಿರಿ ವಾರಂಟ್ ಹೊರಡಿಸಿ ಆರೋಪಿಯು ದಸ್ತಗಿರಿ ಸಿಗದೇ ತಲೆಮರೆಸಿಕೊಂಡಿದ್ದು ನಂತರ ಆರೋಪಿಯ ವಿರುದ್ಧ ಎಲ್.ಪಿ.ಸಿ ವಾರಂಟ್ ಹೊರಡಿಸಿತ್ತು. ಆರೋಪಿ ಹೆಜಮಾಡಿ, ಕೇರಳ ರಾಜ್ಯದ ಇರ್ಕೂರ್, ಆಂಧ್ರದ ಪೊರ್ಗಿಮುಲ್ಲ, ಚಾರ್ಮಡಿ , ತೋಟತ್ತಡಿ, ಕಕ್ಕಿಂಜೆ ಇತ್ಯಾದಿ ಕಡೆ ಸುಮಾರು 27 ವರ್ಷಗಳಿಂದ ತಲೆ ಮರೆಸಿಕೊಂಡಿದ್ದು, ಆರೋಪಿಯು ಚಾರ್ಮಡಿಯ ತೋಟತ್ತಡಿಯಲ್ಲಿ ಇರುವ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಬಳಿಕ ಪೊಲೀಸರು ಬಂಧಿಸಿದ್ದಾರೆ.ಬಂದಿತ ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.