ಪುತ್ತೂರು: ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ 14ನೇ ಶಾಖೆಯನ್ನು ಪುತ್ತೂರಿನ ನೆಲ್ಲಿಕಟ್ಟೆ ರೈ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಶಾಸಕ ಸಂಜೀವ ಮಠಂದೂರು ಹಾಗೂ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಕೊರೋನಾದಿಂದ ಜರ್ಝರಿತವಾದ ಬದುಕನ್ನು ಪುನರಪಿ ರೂಪಿಸಲು ಸಹಾಯ ಆಗುವಂತೆ ಜೆಎಲ್‌ಜಿ ಯೋಜನೆಯಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಿಸಲಾಗುವುದು ಎಂದರು.
ಕೊರೊನಾದಿಂದಾಗಿ ಹಲವು ಕ್ಷೇತ್ರಗಳಂತೆ ಸಹಕಾರ ಕ್ಷೇತ್ರವೂ ಸಾಕಷ್ಟು ಆರ್ಥಿಕ ಹೊಡೆತ ತಿಂದಿದೆ. ಆದರೂ ಹಿಂಜರಿಯದೇ, ಜನರಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಸಹಕಾರಿ ರಂಗ ಸಾಕಷ್ಟು ಶ್ರಮಿಸುತ್ತಿದೆ. ಸಹಕಾರಿ ಕ್ಷೇತ್ರದ ಹುಟ್ಟೂರು ಪುತ್ತೂರು. ಮೊಳಹಳ್ಳಿ ಶಿವರಾಯರಿಂದ ಆರಂಭಗೊಂಡ ಸಹಕಾರಿ ಕ್ಷೇತ್ರ ಇಂದು, ಸಾಕಷ್ಟು ವಿಶಾಲವಾಗಿ ಬೆಳೆದಿದೆ. ಈ ಭಾಗದ ಜನರಿಗೆ ಹೊಸ ಚೈತನ್ಯವನ್ನು ತುಂಬುವಲ್ಲಿ ಯಶಸ್ವಿಯಾಗಿದೆ. ಕೋವಿಡ್‌ನಂತಹ ಸಾಂಕ್ರಾಮಿಕದಿಂದ ಹೊರಬಂದು ಆರ್ಥಿಕ ಸಬಲತೆಯನ್ನು ಸಾಧಿಸುವಂತಾಗಲಿ ಎಂದು ಶುಭಹಾರೈಸಿದರು.
ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ೧೪ನೇ ಶಾಖೆಯನ್ನು ಪುತ್ತೂರಿನಲ್ಲಿ ಉದ್ಘಾಟನೆಗೊಂಡಿದ್ದು, ೩-೪ ದಿನದಲ್ಲಿ ೩ ಕೋಟಿ ರೂ. ಠೇವಣಾತಿ ಸಂಗ್ರಹವಾಗಿದ್ದು, ಪುತ್ತೂರಿನ ಜನರ ಉದಾರತೆಯನ್ನು ಸೂಚಿಸುತ್ತದೆ. ಸಹಕಾರಿ ಕ್ಷೇತ್ರ ಬೆಳೆಯಲು ಸರಕಾರವೂ ಪೂರಕ ವಾತಾವರಣ ನಿರ್ಮಿಸಿಕೊಟ್ಟಿದೆ. ಬೆಳೆಸಾಲ, ಮಧ್ಯಮಾವಧಿ ಸಾಲಗಳನ್ನು ವಿತರಿಸಲಾಗುತ್ತಿದೆ. ಇದರ ಜೊತೆಗೆ ಒಂದು ರೇಷನ್ ಕಾರ್ಡ್‌ನಲ್ಲಿ ಸಹೋದರರಿಬ್ಬರ ಹೆಸರಿದ್ದರೂ, ಅವರಿಗೆ ಪ್ರತ್ಯೇಕ ಸಾಲ ನೀಡಲು ಸಹಕಾರವಾಗುವಂತೆ ಸರಕಾರ ಕಾನೂನಿಗೆ ತಿದ್ದುಪಡಿ ತಂದಿದೆ. ಇದಕ್ಕೆ ಶಾಸಕ ಸಂಜೀವ ಮಠಂದೂರು ಅವರು ಕಾರಣಕರ್ತರು. ಆದ್ದರಿಂದ ಶಾಸಕ ಸಂಜೀವ ಮಠಂದೂರು ಲಕ್ಕಿ ಶಾಸಕ ಎಂದರು.
ಉದ್ಘಾಟನೆ ಮಾಡಿ ಮಾತನಾಡಿದ ಶಾಸಕ ಸಂಜೀವ ಮಠಂದೂರು, ಸಾಮಾನ್ಯ ವ್ಯಕ್ತಿಗೂ ಬದುಕು ಕೊಡುವ ಮೂಲಕ ಸಹಕಾರ ರಂಗದ ಧ್ಯೇಯವಾಕ್ಯ ಇಲ್ಲಿ ಸಾಕಾರಗೊಂಡಿದೆ. ನವೋದಯ ಸೌಹಾರ್ದ ಸಹಕಾರಿ ಸಂಘ ಬಡ ಜನರ ಬದುಕಿಗೆ ಹೊಸ ಚೈತನ್ಯ ನೀಡುವ ಕೆಲಸ ಮಾಡುತ್ತಿದೆ. ಸ್ವಾವಲಂಭಿ, ಸ್ವಾಭಿಮಾನಿ ಜೀವನ ಸಾಗಿಸಲು ಜೆಎನ್‌ಜಿ ಯೋಜನೆಯಡಿ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ಎಂ.ಎನ್. ರಾಜೇಂದ್ರ ಕುಮಾರ್ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದಕ್ಕೆ ಶಾಸಕನ ನೆಲೆಯಲ್ಲಿ, ಸಹಕಾರಿ ಪ್ರಕೋಷ್ಠದ ಪರವಾಗಿ ಬೆಂಬಲ ನೀಡುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹಾಗೂ ಕಟ್ಟಡ ಮಾಲೀಕ ರೋಶನ್ ರೈ ಅವರನ್ನು ಸನ್ಮಾನಿಸಲಾಯಿತು.ರೈ ಕಮರ್ಷಿಯಲ್ ಕಾಂಪ್ಲೆಕ್ಸ್ ಮಾಲಕ ರೋಶನ್ ರೈ ಅವರನ್ನು ಸನ್ಮಾನಿಸಲಾಯಿತು.
ಹಿರಿಯ ಸಹಕಾರಿ ಧುರೀಣ ಸವಣೂರು ಸೀತಾರಾಮ ರೈ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ವಾಸು ಉಪಸ್ಥಿತರಿದ್ದರು.
ಗಣಕೀಕರಣದ ಉದ್ಘಾಟನೆಯನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಭದ್ರತಾ ಕೊಠಡಿಯನ್ನು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್‌ನ ಪುತ್ತೂರು ವಲಯ ಅಧ್ಯಕ್ಷ ಭಾಸ್ಕರ್ ಎಸ್. ಕೋಟ್ಯಾನ್ ಹಾಗೂ ನೂತನ ಸ್ವಸಹಾಯ ಸಂಘಗಳಾದ ಭ್ರಾಮರಿ ಹಾಗೂ ಅಮೃತಾ ನವೋದಯ ಸ್ವಸಹಾಯ ಸಂಘಗಳನ್ನು ದ.ಕ. ಕೃಷಿ ಅಭಿವೃದ್ಧಿ ಸಹಕಾರಿ ಸಂಘ ಅಧ್ಯಕ್ಷ ರವೀಂದ್ರ ಕಂಬಳಿ ಉದ್ಘಾಟಿಸಿದರು.
ಸಾಲ ಪತ್ರವನ್ನು ಎಸ್.ಕೆ. ರಾಜ ಅವರಿಗೆ ಡಾ. ಎಂ.ಎನ್. ರಾಜೇಂದ್ರ ಕುಮಾರ್ ವಿತರಿಸಿದರು. ಪ್ರಥಮ ಠೇವಣಿ ಪತ್ರವನ್ನು ಎಂ. ದಿನೇಶ್ ರೈ ಮೂಳೆ, ಪ್ರವೀಣ್ ರೈ ಹಾಗೂ ಕೃಷ್ಣಪ್ರಸಾದ್ ಆಳ್ವ ಅವರಿಗೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ಬಿ. ಜಯರಾಮ ರೈ ವಿತರಿಸಿದರು. ಶಾಸಕ ಸಂಜೀವ ಮಠಂದೂರು ಹಾಗೂ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಚೈತನ್ಯ ವಿಮೆಯನ್ನು ವಿತರಿಸಿದರು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾರಾಟಧಿಕಾರಿ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು. ರತ್ನಕುಮಾರ್, ಸತೀಶ್, ರಂಜಿತ್, ಹರಿನಾಥ್, ರಾಘವ್ ಶೆಟ್ಟಿ, ಸುನಿಲ್ ಕುಮಾರ್ ಬಜಗೋಳಿ ಅತಿಥಿಗಳನ್ನು ಗೌರವಿಸಿದರು.





































