ಮಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರು ಭಾಗವಹಿಸಿದ ಕಾರ್ಯಕ್ರಮಕ್ಕೆ ಸಿಎಫ್‌ಐ ಅಡ್ಡಿಪಡಿಸಿ ಸಭಾಂಗಣದ ಹೊರಗೆ ಪ್ರತಿಭಟಿಸಿದ ಘಟನೆ ಮಂಗಳೂರಿನ ಕೊಣಾಜೆ ವಿಶ್ವ ವಿದ್ಯಾನಿಲಯದಲ್ಲಿ ನಡೆದಿದೆ. ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನೂತನ ಶಿಕ್ಷಣ ನೀತಿಯಿಂದ ವರ್ಣಾಶ್ರಮ ಮತ್ತೆ ಬರಲಿದೆ. ಪ್ರಾಚೀನ ಯುಗದ ಇತಿಹಾಸದಲ್ಲಿ ಮೌಢ್ಯತೆ ತುಂಬಿದೆ. ಆ ಮೌಢ್ಯತೆಯನ್ನು ನಾವು ನಮ್ಮ ಮಕ್ಕಳಿಗೆ ಕಲಿಸಲಾಗುವುದಿಲ್ಲ ಎಂದು ವಾದ ಮಂಡಿಸಿದ್ದಾರೆ. ಪ್ರತಿಭಟನೆ ಬಗ್ಗೆ ಪೊಲೀಸರಿಗೆ ಮೊದಲೇ ಸುಳಿವು ಸಿಕ್ಕಿದ್ದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ನಿಯೋಜಿಸಲಾಗಿತ್ತು.

ಹೀಗಾಗಿ ಪ್ರತಿಭಟನೆಗೆ ಮುಂದಾಗುತ್ತಿದ್ದಂತೆಯೇ 50 ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಈ ವೇಳೆ ವಿದ್ಯಾರ್ಥಿಗಳನ್ನು ಎಳೆದಾಡಿ ಪೊಲೀಸ್ ವ್ಯಾನ್ ಗೆ ತುಂಬಿಸಿದ್ದಾರೆ. ವಿವಿಯ ಅಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಅಶ್ವತ್ಥ ನಾರಾಯಣ ಭಾಗಿಯಾಗಿದ್ದು, ಸಭಾಂಗಣದ ಹೊರಗೆ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ.