ಮಂಗಳೂರು: ಉಳ್ಳಾಲ ಠಾಣಾ ವ್ಯಾಪಿಯ ಕೊಲ್ಯದ ಬಲ್ಯ ಬಳಿ ನಡೆದ ತೋಟಕ್ಕೆ ಬಂದ ಎಮ್ಮೆಯ ಕತ್ತುಕೊಯ್ದು ಹತ್ಯೆ ನಡೆಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಏಳು ಮಂದಿಯನ್ನು ಬಂಧಿಸಲಾಗಿದೆ.
ಕೋಟೆಕಾರ್ ನಿಂದ ಜಯರಾಮ್ ರೈ (58), ಮಲ್ಲೂರಿನಿಂದ ಉಮರ್ (37), ಕೋಟೆಕಾರ್ ನಿಂದ ಉಮರ್ ಫಾರೂಕ್ (42), ದೇರಳಕಟ್ಟೆಯ ಮೊಹಮ್ಮದ್ ಸುಹೇಲ್ (26), ಸೋಮೇಶ್ವರದ ಮೊಹಮ್ಮದ್ ಕಲಂಧರ್ (43), ಮಲ್ಲೂರಿನಮೊಹಮ್ಮದ್ ಸಿನಾನ್ (22) ಮತ್ತು ಸೋಮೇಶ್ವರದ ಇಲ್ಯಾಸ್ (38) ) ಎಂಬವರನ್ನು ಬಂಧಿಸಲಾಗಿದೆ.

ಬಂಧಿತರಿಂದ ಒಂದು ನಾಲ್ಕು ಚಕ್ರ ವಾಹನ, ಒಂದು ಸ್ಕೂಟರ್, ಎಸ್ ಬಿಬಿ ಎಲ್ ಗನ್, ಮಾರಕಾಸ್ತ್ರಗಳು, ಜೀವಂತ ಗುಂಡುಗಳು, ಹಗ್ಗ, ಮರದ ದಿಮ್ಮಿಯನ್ನು ವಶಪಡಿಸಿಕೊಳ್ಳಲಾಗಿದೆ.
ಬಂದಿತ ಪ್ರಮುಖ ಆರೋಪಿ ಜಯರಾಮ್ ರೈ ಅವರ ತೋಟವನ್ನುಎಮ್ಮೆ ನಾಶ ಮಾಡುತ್ತಿದ್ದ ಕಾರಣ ಎರಡು – ಮೂರು ಬಾರಿ ಎಮ್ಮೆಯನ್ನು ಹಿಡಿಯಲು ವಿಫಲವಾಗಿದ್ದ. ಹೀಗಾಗಿ ಕೊಡಗಿನ ವ್ಯಕ್ತಿಯನ್ನು ಸಂಪರ್ಕಿಸಿ ಎಸ್ಬಿಬಿಎಲ್ ಗನ್ ಖರೀದಿಸಿ ಇತರರ ಸಹಾಯದಿಂದ ಅದರ ಮೇಲೆ ಎರಡು ಗುಂಡು ಹಾರಿಸಿದ್ದಾರೆ. ಬಳಿಕ ಮಾಂಸ ಮಾಡಿ ಮಾರುವ ಉದ್ದೇಶದಿಂದ ಕುತ್ತಿಗೆಯನ್ನು ಕತ್ತರಿಸಿದ್ದಾರೆ. ಆದರೆ ಗುಂಡಿನ ಮೊರೆತ ಕೇಳಿ ಸ್ಥಳೀಯರು ಧಾವಿಸಿ ಬಂದ ಕಾರಣ ಆರೋಪಿಗಳು ಪರಾರಿಯಾಗಿದ್ದರು.ಘಟನೆ ಬಳಿಕ ತೋಟದ ಮಾಲೀಕನ ಕೈವಾಡ ಇದೆ ಎಂದು ಹಿಂದೂ ಸಂಘಟನೆ ಆರೋಪಿಸಿ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದರು.