ಬೆಳ್ತಂಗಡಿ ತಾಲೂಕಿನ ಕಂಬಳದಡ್ಡ ಪ್ರದೇಶದಲ್ಲಿ ವೇಣೂರು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ನಿಷೇಧಿತ MDMA ಮಾದಕ ವಸ್ತು ಸಾಗಾಟ ಪತ್ತೆಯಾಗಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ವೇಣೂರು ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಅಕ್ಷಯ್ ಡವಗಿರವರಿಗೆ ಮೇ 27ರಂದು ಮಧ್ಯಾಹ್ನ ವೇಳೆ ನಿಷೇಧಿತ MDMA ಸಾಗಾಟದ ಕುರಿತು ಖಚಿತ ಮಾಹಿತಿ ಲಭಿಸಿತ್ತು. ಮಾಹಿತಿ ಮೇರೆಗೆ ಠಾಣಾ ಸಿಬ್ಬಂದಿಗಳೊಂದಿಗೆ ಗುರುವಾಯನಕೆರೆ–ಮೂಡಬಿದ್ರೆ ರಸ್ತೆಯ ಕಂಬಳದಡ್ಡ ಪ್ರದೇಶದಲ್ಲಿ ದಾಳಿ ನಡೆಸಲಾಯಿತು.
ಈ ವೇಳೆ KA 13 P 2905 ನೋಂದಣಿಯ ಕಾರನ್ನು ತಪಾಸಣೆ ನಡೆಸಿದಾಗ, ಮಂಗಳೂರು ಮಿಜಾರು ನಿವಾಸಿ ಮಹಮ್ಮದ್ ತಹ್ನವೀರ್ (27) ಹಾಗೂ ಮೂಡಬಿದ್ರೆ ನಿವಾಸಿ ಮಹಮ್ಮದ್ ಸಲ್ವಾನ್ (22) ಎಂಬವರು ಅಕ್ರಮವಾಗಿ ಸುಮಾರು 3.92 ಗ್ರಾಂ ತೂಕದ MDMA ಮಾದಕ ವಸ್ತುವನ್ನು ಸಾಗಾಟ ಮಾಡುತ್ತಿರುವುದು ಪತ್ತೆಯಾಯಿತು. ವಶಪಡಿಸಿಕೊಂಡ ಮಾದಕ ವಸ್ತುವಿನ ಮೌಲ್ಯ ಅಂದಾಜು ₹39,200 ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಮಾದಕ ವಸ್ತು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 41/2026, ಕಲಂ 8(c), 22(b) NDPS Act ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.



























