ಮುಕ್ಕೂರು : ದಶಮಾನೋತ್ಸವದ ಸಂಭ್ರಮದಲ್ಲಿರುವ, ಸದಾ ಸಮಾಜಮಖಿ ಚಿಂತನೆಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಮುಕ್ಕೂರು ನೇಸರ ಯುವಕ ಮಂಡಲ ಈ ಬಾರಿ ಎರಡನೇ ವರ್ಷದ ಅಂತರ್ ತಾಲೂಕು ಮಟ್ಟದ ನೇಸರ ವಾರ್ಷಿಕ ಪ್ರಶಸ್ತಿ-2026 ಪ್ರಧಾನಿಸಲಿದ್ದು ಉತ್ತಮ ಸಂಘ ಸಂಸ್ಥೆ ವಿಭಾಗದಲ್ಲಿ ಸುಳ್ಯ ತಾಲೂಕಿನ ನೆಟ್ಟಾರು ಅಕ್ಷಯ ಯುವಕ ಮಂಡಲ ಆಯ್ಕೆಯಾಗಿದೆ.
ಈ ಪ್ರಶಸ್ತಿಯು ಸುಳ್ಯ, ಪುತ್ತೂರು, ಕಡಬ ತಾಲೂಕು ವ್ಯಾಪ್ತಿಯನ್ನು ಒಳಗೊಂಡಿದೆ. ಮೂರು ತಾಲೂಕಿನ ಸಂಘ ಸಂಸ್ಥೆಗಳ ಸಾಧನೆಗಳನ್ನು ಪರಿಗಣಿಸಿ ಅವುಗಳ ಪೈಕಿ ಬಹು ಕ್ಷೇತ್ರದಲ್ಲಿ ಸಾಧನೆ ತೋರುತ್ತಿರುವ ಅಕ್ಷಯ ಯುವಕ ಮಂಡಲವನ್ನು ಪರಿಣಿತರ ತಂಡ ಆಯ್ಕೆ ಮಾಡಿದೆ. ಸೆ.14ರಂದು ಮುಕ್ಕೂರಿನಲ್ಲಿ ನಡೆಯುವ 17 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಾರಂಭದಲ್ಲಿ ಗಣ್ಯ ಅತಿಥಿಗಳು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
2000 ರಲ್ಲಿ ಸ್ಥಾಪನೆಯಾದ ನೆಟ್ಟಾರು ಅಕ್ಷಯ ಯುವಕ ಮಂಡಲವು ಕಳೆದ 25 ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಹಾಗೂ ಪರಿಸರ ಸಂರಕ್ಷಣೆಯ ಕ್ಷೇತ್ರಗಳಲ್ಲಿ ನಿರಂತರ ಸೇವೆ ಸಲ್ಲಿಸುತ್ತಾ ಮಾದರಿ ಸಂಘಟನೆಯಾಗಿ ಬೆಳೆದಿದೆ. ಪ್ರಸ್ತುತ ಮಂಡಲವು ತನ್ನ ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದು, ಅದರ ಅಂಗವಾಗಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿದೆ.
2004ರಲ್ಲಿ ಬಡ ಕುಟುಂಬವೊಂದಕ್ಕೆ ಮನೆ ನಿರ್ಮಿಸಿಕೊಡುವ ಮೂಲಕ ಸೇವಾ ಕಾರ್ಯಕ್ಕೆ ಚಾಲನೆ ನೀಡಿದ್ದ ಮಂಡಲ, 2011ರಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ದಾನಿಗಳ ನೆರವಿನಿಂದ ನೆಟ್ಟಾರು ಶಾಲೆಯಲ್ಲಿ ಅಕ್ಷಯ ಬಯಲು ರಂಗಮಂದಿರ ನಿರ್ಮಿಸಿ ಶಾಶ್ವತ ಕೊಡುಗೆ ನೀಡಿತ್ತು. ಅಲ್ಲದೆ ಪ್ರತಿವರ್ಷ ಶಾಲಾ ವಾರ್ಷಿಕೋತ್ಸವ, ಶ್ರೀಕೃಷ್ಣ ಜನ್ಮಾಷ್ಟಮಿ, ಪ್ರತಿಭಾ ಪುರಸ್ಕಾರ, ಶಾಲಾ ಮಕ್ಕಳಿಗೆ ನೋಟ್‌ಪುಸ್ತಕ ವಿತರಣೆ, ಆಶಕ್ತರಿಗೆ ನೆರವು ಹಾಗೂ ದೇವಸ್ಥಾನ–ದೈವಸ್ಥಾನಗಳಲ್ಲಿ ಶ್ರಮಸೇವೆಯನ್ನು ನಿರಂತರವಾಗಿ ನಡೆಸಿಕೊಂಡು ಬಂದಿದೆ.
ಮೊಗಪ್ಪೆ ಕೆರೆಯ ಅಭಿವೃದ್ಧಿಗೆ ಆರ್ಥಿಕ ನೆರವು, ಸ್ವಚ್ಛ ಭಾರತ ಅಭಿಯಾನದಡಿ ಪರಿಸರ ಸ್ವಚ್ಛತೆ, ಗ್ರಾಮ ಪಂಚಾಯತ್ ಜತೆಗೂಡಿ ಸ್ವಚ್ಛತಾ ಕಾರ್ಯ, ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ರಕ್ತದಾನ ಶಿಬಿರಗಳಂತಹ ಕಾರ್ಯಕ್ರಮಗಳ ಮೂಲಕ ಮಂಡಲವು ಸಮಾಜದ ವಿಶ್ವಾಸ ಗಳಿಸಿದೆ. ಬೆಳ್ಳಿಹಬ್ಬದ ಅಂಗವಾಗಿ ನೆಟ್ಟಾರು ಶಾಲೆಯಲ್ಲಿ ಕೈತೊಳೆಯುವ ಸ್ಥಳಕ್ಕೆ ಟೈಲ್ಸ್ ಅಳವಡಿಕೆ, ಶೌಚಾಲಯದ ಸುತ್ತ ಮೇಲ್ಛಾವಣಿ ನಿರ್ಮಾಣ, ಅಡುಗೆ ಕೋಣೆ ವಿಸ್ತರಣೆ ಸೇರಿದಂತೆ ಹಲವು ಮೂಲಸೌಕರ್ಯ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಜತೆಗೆ ಬೆಳ್ಳಿಹಬ್ಬದ ನೆನಪಿಗಾಗಿ 25 ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಅಕ್ಷಯ ಯುವಕ ಮಂಡಲವು ಶಿಸ್ತು, ಸೇವಾಭಾವ ಮತ್ತು ಸಮಾಜಮುಖಿ ಚಿಂತನೆಯ ಮೂಲಕ ಇತರ ಸಂಘಟನೆಗಳಿಗೆ ಮಾದರಿಯಾಗಿದೆ. ಸ್ಥಳೀಯ ಸಾಧಕರಿಗೆ ಸನ್ಮಾನ, ಕ್ರೀಡೆಗೆ ಪ್ರೋತ್ಸಾಹ, ಶಿಕ್ಷಣಕ್ಕೆ ಬೆಂಬಲ ಹಾಗೂ ಗ್ರಾಮಾಭಿವೃದ್ಧಿಗೆ ನಿರಂತರ ಕೊಡುಗೆ ನೀಡುತ್ತಿರುವ ಮಂಡಲದ ಸೇವೆಯನ್ನು ಪರಿಗಣಿಸಿ ನೇಸರ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.


























