ಸುಳ್ಯ : ತೋಟದ ಅಡಿಕೆ ಪಾಲದಿಂದ ಬಿದ್ದು ವೃದ್ಧರೊಬ್ಬರು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಜೋಗಿಮೂಲೆ ಎಂಬಲ್ಲಿ ನಡೆದಿದೆ.
ಮೃತರನ್ನು ಜೋಗಿಮೂಲೆ ನಿವಾಸಿ ಚಂದ್ರಶೇಖರ (64) ಎಂದು ಗುರುತಿಸಲಾಗಿದೆ. ಚಂದ್ರಶೇಖರ ಅವರು ಜು. 8 ರಂದು ಸಂಜೆ ಮನೆಯಿಂದ ಹೊರಗೆ ತೆರಳಿದ್ದು, ಬಳಿಕ ಮನೆಗೆ ಮರಳಿರಲಿಲ್ಲ ಎನ್ನಲಾಗಿದೆ.
ಇದರಿಂದ ಕುಟುಂಬಸ್ಥರು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದರೂ ಅವರು ಪತ್ತೆಯಾಗಿರಲಿಲ್ಲ.
ಜು.9 ರಂದು ಸಂಜೆ ಅವರ ಪುತ್ರ ಡೈರಿಗೆ ಹಾಲು ನೀಡಲು ತೋಟದ ಕಡೆಗೆ ತೆರಳಿದ ವೇಳೆ ಚಂದ್ರಶೇಖರ ಅವರು ತೋಟದ ಪಾಲದಿಂದ ತೋಡಿಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸುಳ್ಯ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
ಮೃತರು ಪತ್ನಿ, ಪುತ್ರಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

























