ದಿನಾಂಕ 08/07/2026ರಂದು ಬಂಟ್ವಾಳ ತಾಲೂಕು ಮಟ್ಟದ ಪಂಚ ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯು ತಾಲೂಕು ಪಂಚಾಯತ್ ಪಂಚ ಗ್ಯಾರೆಂಟಿ ಅನುಷ್ಠಾನ ಸಮಿತಿ ಕಚೇರಿಯಲ್ಲಿ ನಡೆಯಿತು.
ಗಡಿನಾಡ ವಿದ್ಯಾರ್ಥಿನಿಯರಿಗೆ ಬಸ್ ಪಾಸ್ ವಿತರಿಸಲಾಗುತ್ತಿದ್ದು, ಮಂಗಳೂರು ಘಟಕ ಹಾಗೂ ಬಂಟ್ವಾಳ ಭಾಗದಲ್ಲಿ ನೆಲೆಸಿರುವ ಗಡಿನಾಡ ವಿದ್ಯಾರ್ಥಿನಿಯರಿಗೆ ಬಂಟ್ವಾಳ ಘಟಕದಲ್ಲಿ ಬಸ್ ಪಾಸ್ ವಿತರಿಸಲಾಗುತ್ತಿದೆ ಎಂದು ಕೆಎಸ್ಸಾರ್ಟಿಸಿ ಬಿಸಿ ರೋಡ್ ಘಟಕದ ವ್ಯವಸ್ಥಾಪಕರು ತಿಳಿಸಿದರು.
ಕಳೆದ ಸಭೆಯಲ್ಲಿ ತಿಳಿಸಿದಂತೆ ಕೆ.ಸಿ. ರೋಡ್ ನಲ್ಲಿ ಬಸ್ ನಿಲುಗಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಂಭೂರ್ ಭಾಗಕ್ಕೆ ಹಾಗೂ ಮೂಡಬಿದಿರೆ- ಬಿ.ಸಿ.ರೋಡ್ ಮಾರ್ಗದಲ್ಲಿ ಕೆಎಸ್ಆರ್ಟಿಸಿ ಬಸ್ ಸಂಚಾರದ ವ್ಯವಸ್ಥೆಯನ್ನು ಮಾಡಬೇಕು. ಮಣಿಹಳ್ಳದಲ್ಲಿ ಬಸ್ ನಿಲುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಸದಸ್ಯರು ಆಗ್ರಹಿಸಿದರು.
ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಬಂಟ್ವಾಳ ತಾಲೂಕಿನಲ್ಲಿ ಕಳೆದ ಒಂದು ತಿಂಗಳಿನಲ್ಲಿ 93 ಮರಣ ಹೊಂದಿದವರರ ಪಟ್ಟಿ ಮಾಡಲಾಗಿದ್ದು, 5.22 ಲಕ್ಷ ರೂ. ರಿಕವರಿ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ತಿಳಿಸಿದರು.
ಪಡಿತರ ಚೀಟಿ ಸಮಸ್ಯೆಯಿಂದ ಅರ್ಹ ಮಹಿಳೆಯರು ಗೃಹಲಕ್ಷ್ಮೀ ಯೋಜನೆಯಿಂದ ವಂಚಿತರಾಗಿದ್ದು, ಸಮಸ್ಯೆ ಸರಿಪಡಿಸಲು ಸಮಿತಿ ಸದಸ್ಯರು ಸಭೆಯ ಗಮನಕ್ಕೆ ತಂದರು.
ಆಗಸ್ಟ್ ಅಂತ್ಯದವರೆಗೆ ಗೃಹ ಜ್ಯೋತಿ ಯೋಜನೆಗೆ ಹೊಸ ನೋಂದಣಿಯನ್ನು ಮಾಡಿಕೊಳ್ಳಲಾಗುವುದಿಲ್ಲ.
ಈಗಾಗಲೇ ಮೆಸ್ಕಾಂ ವತಿಯಿಂದ ಸಮೀಕ್ಷ ಕೈಗೊಳ್ಳಲಾಗಿದ್ದು, ಈ ಸಂದರ್ಭದಲ್ಲಿ ಅಗತ್ಯ ದಾಖಲೆಗಳನ್ನು ನೀಡಿ ಸಹಕರಿಸಬೇಕು ಎಂದು ಮೆಸ್ಕಾಂ ಅಧಿಕಾರಿ ತಿಳಿಸಿದರು.
ಬಂಟ್ವಾಳ ತಾಲೂಕು ಮಟ್ಟದ ಪಂಚ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಜಯಂತಿ ವಿ.ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪಂಚ ಗ್ಯಾರೆಂಟಿ ಜಿಲ್ಲಾ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ನಾರಾಯಣ ನಾಯ್ಕ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಂಚ ಗ್ಯಾರೆಂಟಿ ಅನುಷ್ಠಾನ ಸಮಿತಿ ಸದಸ್ಯ ಕಾರ್ಯದರ್ಶಿಗಳಾದ ಸಚಿನ್ ಕುಮಾರ್, ಸಮಿತಿ ಸದಸ್ಯರು ಹಾಗೂ ಪಂಚ ಗ್ಯಾರೆಂಟಿ ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಬ್ಯಾನರ್ ಅನಾವರಣ:
ಪಂಚ ಗ್ಯಾರೆಂಟಿ ಯೋಜನೆಗಳ ಬಗ್ಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಸಲುವಾಗಿ ಬ್ಯಾನರ್ ಅನಾವರಣಗೊಳಿಸಲಾಯಿತು

























