ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರ ಮೆಲ್ಕಾರ್–ಕಲ್ಲಡ್ಕ ನಡುವಿನ ನರಹರಿ ಪರ್ವತದ ಮುಂಭಾಗದಲ್ಲಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾರೆ.
ಮೃತರನ್ನು ಪುತ್ತೂರು ತಾಲ್ಲೂಕಿನ ಕೊಡಿಪ್ಪಾಡಿ ನಿವಾಸಿ ಅಶೋಕ್ (34) ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಬಿ.ಸಿ.ರೋಡ್ ಕಡೆಗೆ ತೆರಳುತ್ತಿದ್ದ ಬಿಳಿ ಬಣ್ಣದ ಮಾರುತಿ ಸ್ವಿಫ್ಟ್ ಡಿಸೈರ್ ಕಾರು (ನೋಂದಣಿ ಸಂಖ್ಯೆ: KA-21-C-4128)ಗೆ, ವಿರುದ್ಧ ದಿಕ್ಕಿನಿಂದ ಬಂದ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದಿದೆ.
ಘಟನೆ ನಡೆದ ಸ್ಥಳದಲ್ಲಿ ಹೆದ್ದಾರಿಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಜಾರಿಯಲ್ಲಿದ್ದು, ಬೈಕ್ ಸವಾರ ಒನ್‌ವೇ ನಿಯಮ ಉಲ್ಲಂಘಿಸಿ ರಾಂಗ್ ಸೈಡ್‌ನಲ್ಲಿ ಸಂಚರಿಸಿದ್ದೇ ಅಪಘಾತಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಪಘಾತದ ತೀವ್ರತೆಗೆ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಬಳಿಕ ಮೃತಪಟ್ಟಿದ್ದಾರೆ.
ಘಟನೆಯ ಕುರಿತು ಸಂಬಂಧಿತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

























