ಪುತ್ತೂರು: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪ, ಗಿಟ್ಟರ್ಸ್ ಫ್ಯಾನ್ಸಿ ಎದುರು ರಿಕ್ಷಾ ಪಾರ್ಕಿಂಗ್ ಪಕ್ಕದಲ್ಲಿರುವ ಡಾ. ಕೆ. ಶಿವರಾಮ ಕಾರಂತ ಸರ್ಕಾರಿ ಪ್ರೌಢಶಾಲೆಯ ಆವರಣ ಗೋಡೆ ಭಾನುವಾರ ರಾತ್ರಿ ಸುರಿದ ಭಾರೀ ಮಳೆಯ ಪರಿಣಾಮ ಕುಸಿದು ಬಿದ್ದಿದೆ.
ಕೆಲ ದಿನಗಳ ಹಿಂದೆಯೇ ಗೋಡೆ ವಾಲಿ ಅಪಾಯದ ಸ್ಥಿತಿಯಲ್ಲಿದ್ದ ಹಿನ್ನೆಲೆಯಲ್ಲಿ ಪುತ್ತೂರು ನಗರಸಭೆ ಮುನ್ನೆಚ್ಚರಿಕಾ ಕ್ರಮವಾಗಿ ಎಚ್ಚರಿಕೆ ಫಲಕ ಅಳವಡಿಸಿ, ಸಾರ್ವಜನಿಕರು ಗೋಡೆಯ ಸಮೀಪ ಸಂಚರಿಸದಂತೆ ಸೂಚಿಸಿತ್ತು.
ಘಟನೆ ರಾತ್ರಿ ವೇಳೆ ಸಂಭವಿಸಿದ್ದು, ಭಾನುವಾರದ ರಜೆಯ ಹಿನ್ನೆಲೆ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಇರದ ಕಾರಣ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ. ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.
























