ಕಡಬ: ತೂಕವನ್ನು ಕೃತಕವಾಗಿ ಹೆಚ್ಚಿಸಿದ ಚಿನ್ನಾಭರಣವನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು ಹಣ ಪಡೆಯುವ ಮೂಲಕ ಬ್ಯಾಂಕ್‌ಗೆ ವಂಚನೆ ಎಸಗಲು ಯತ್ನಿಸಿದ ಆರೋಪದಡಿ ಇಬ್ಬರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಜುಲೈ 3ರಂದು ಸಂಜೆ ಕಡಬ ಪೇಟೆಯಲ್ಲಿ ಇಬ್ಬರು ವ್ಯಕ್ತಿಗಳು ಸಂಶಯಾಸ್ಪದವಾಗಿ ಓಡಾಡುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ಇಬ್ಬರೂ ಸುಮಾರು 120 ಗ್ರಾಂ ಚಿನ್ನಾಭರಣವನ್ನು ಬ್ಯಾಂಕ್‌ನಲ್ಲಿ ಅಡವಿಡಲು ಬಂದಿರುವುದಾಗಿ ತಿಳಿಸಿದರು.
ಅವರ ವರ್ತನೆ ಅನುಮಾನಾಸ್ಪದವಾಗಿದ್ದರಿಂದ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಯಿತು. ಆಗ ಅವರು ಉಪ್ಪಿನಂಗಡಿ ನಿವಾಸಿ ಮಹಮ್ಮದ್ ಫಾಯಿಝ್ (20) ಹಾಗೂ ಬಂಟ್ವಾಳ ಕಸಬಾ ನಿವಾಸಿ ಮೊಹಮ್ಮದ್ ಮುರ್ಷೀದ್ (45) ಎಂದು ಗುರುತಿಸಲಾಯಿತು.
ಚಿನ್ನಾಭರಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಅವರು ಸಲ್ಲಿಸದ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ಮುಂದುವರಿಸಿದರು. ವಿಚಾರಣೆ ವೇಳೆ ಚಿನ್ನಾಭರಣದ ತೂಕವನ್ನು ಕೃತಕವಾಗಿ ಹೆಚ್ಚಿಸಿ ಬ್ಯಾಂಕ್‌ನಲ್ಲಿ ಅಡವಿಟ್ಟು ಬ್ಯಾಂಕ್‌ಗೆ ವಂಚನೆ ಮಾಡಿ ಹಣ ಪಡೆಯುವ ಉದ್ದೇಶದಿಂದ ಬಂದಿರುವುದಾಗಿ ಆರೋಪಿಗಳು ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 83/2026ರಡಿ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 318(4) ಹಾಗೂ 62ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

























