ಬಂಟ್ವಾಳ: ಹುಲ್ಲು ಕತ್ತರಿಸುವ ಯಂತ್ರದಡಿ ಅವಿತಿದ್ದ ನಾಗರಹಾವು ಕಡಿದ ಪರಿಣಾಮ ಆಟೋ ಚಾಲಕರೊಬ್ಬರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕೊಲ್ನಾಡು ಗ್ರಾಮದ ಸೆರ್ಕಳ ಕಾರ್‌ನಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ಮೃತರನ್ನು ಸೆರ್ಕಳ ಕಾರ್ ನಿವಾಸಿ ಸುಲೈಮಾನ್ ಅವರ ಪುತ್ರ ಹಾಗೂ ಆಟೋ ಚಾಲಕರಾದ ಹಸೈನಾರ್ (50) ಎಂದು ಗುರುತಿಸಲಾಗಿದೆ.
ಮಾಹಿತಿಯಂತೆ, ಇಂದು ಬೆಳಿಗ್ಗೆ ಮನೆಯ ಪಕ್ಕದಲ್ಲಿ ಇಟ್ಟಿದ್ದ ಹುಲ್ಲು ಕತ್ತರಿಸುವ ಯಂತ್ರವನ್ನು ತೆಗೆದುಕೊಳ್ಳಲು ಹಸೈನಾರ್ ಮುಂದಾದ ವೇಳೆ, ಯಂತ್ರದ ಅಡಿಯಲ್ಲಿ ಅವಿತುಕೊಂಡಿದ್ದ ನಾಗರಹಾವು ಏಕಾಏಕಿ ಕಡಿದಿದೆ. ತಕ್ಷಣ ಅಸ್ವಸ್ಥಗೊಂಡ ಅವರನ್ನು ಸ್ಥಳೀಯರು ಕಲ್ಲಡ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿನ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕಂಕನಾಡಿಯ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ದಾರಿಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಸೆರ್ಕಳದ ಉರಗ ರಕ್ಷಕ ಹೈದರ್ ಸ್ಥಳಕ್ಕೆ ಆಗಮಿಸಿ, ಹುಲ್ಲು ಕತ್ತರಿಸುವ ಯಂತ್ರದ ಬಳಿ ಅಡಗಿಕೊಂಡಿದ್ದ ನಾಗರಹಾವನ್ನು ಸುರಕ್ಷಿತವಾಗಿ ಸೆರೆಹಿಡಿದಿದ್ದಾರೆ.
ದುಡಿಮೆಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಆಟೋ ಚಾಲಕ ಹಸೈನಾರ್ ಅವರ ಅಕಾಲಿಕ ನಿಧನಕ್ಕೆ ಕುಟುಂಬಸ್ಥರು ಹಾಗೂ ಸ್ಥಳೀಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

























