ಸುಳ್ಯ, ಜು. 2: ಸುಳ್ಯ ನಗರ ಪಂಚಾಯಿತಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗೆ ಬಿಲ್ ಕಲೆಕ್ಟರ್ ಮೊಬೈಲ್ ಮೂಲಕ ಅಶ್ಲೀಲ ಸಂದೇಶ ಕಳುಹಿಸಿದ ಆರೋಪದ ಹಿನ್ನೆಲೆಯಲ್ಲಿ ನಗರ ಪಂಚಾಯಿತಿ ಕಚೇರಿಯಲ್ಲೇ ಗಲಾಟೆ ನಡೆದು, ಬಿಲ್ ಕಲೆಕ್ಟರ್ ಮೇಲೆ ಹಲ್ಲೆ ನಡೆದ ಘಟನೆ ವರದಿಯಾಗಿದೆ.
ಮಹಿಳಾ ಸಿಬ್ಬಂದಿಯ ಪತಿ ಪ್ರವೀಣ್ ಕುಮಾರ್ ಅವರು ನಗರ ಪಂಚಾಯಿತಿ ಕಚೇರಿಗೆ ತೆರಳಿ, ಬಿಲ್ ಕಲೆಕ್ಟರ್ ರೋಹಿತ್ ಅವರನ್ನು ಮುಖ್ಯಾಧಿಕಾರಿಯವರ ಕೊಠಡಿಯಲ್ಲಿ ವಿಚಾರಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ತಮ್ಮ ಪತ್ನಿಗೆ ಅಶ್ಲೀಲ ಸಂದೇಶ ಕಳುಹಿಸಿರುವ ಕುರಿತು ಪ್ರಶ್ನಿಸಿದಾಗ, ಅಂತಹ ಯಾವುದೇ ಸಂದೇಶ ತಾನು ಕಳುಹಿಸಿಲ್ಲ ಎಂದು ರೋಹಿತ್ ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಇದರಿಂದ ಮಾತಿನ ಚಕಮಕಿ ನಡೆದು, ಆಕ್ರೋಶಗೊಂಡ ಪ್ರವೀಣ್ ಕುಮಾರ್ ಅವರು ರೋಹಿತ್ ಅವರಿಗೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಕಚೇರಿಗೆ ಬೇರೆ ಕಾರ್ಯ ನಿಮಿತ್ತ ಆಗಮಿಸಿದ್ದ ಪತ್ರಕರ್ತ ರಶೀದ್ ಜಟ್ಟಿಪಳ್ಳ ಅವರು ಗಲಾಟೆ ತಡೆಯಲು ಮುಂದಾದಾಗ, ಅವರ ಮೇಲೂ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಘಟನೆಯ ಬಳಿಕ ನಗರ ಪಂಚಾಯಿತಿ ಮುಖ್ಯಾಧಿಕಾರಿ ಬಸವರಾಜ್ ಅವರು ಮಹಿಳಾ ಸಿಬ್ಬಂದಿ ಹಾಗೂ ಬಿಲ್ ಕಲೆಕ್ಟರ್ ಅವರನ್ನು ಕರೆಸಿ ಪ್ರಾಥಮಿಕ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಅಶ್ಲೀಲ ಸಂದೇಶ ಕಳುಹಿಸಿರುವ ಆರೋಪ ಹಾಗೂ ಹಲ್ಲೆ ಪ್ರಕರಣ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆಯೇ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.


























