ಉಡುಪಿ: ಕರಾವಳಿಯ ಪ್ರಸಿದ್ಧ ಹುಲಿವೇಷ ಕಲಾವಿದ ಮಂಜುನಾಥ್ (43) ಅವರು ಬ್ರಹ್ಮಾವರ ತಾಲೂಕಿನ ಹೇರೂರಿನ ರುಡ್‌ಸೆಟ್ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಉಡುಪಿ ಜಿಲ್ಲೆಯ ಸಂತೆಕಟ್ಟೆ ಲಕ್ಷ್ಮೀನಗರ ನಿವಾಸಿಯಾಗಿದ್ದ ಮಂಜುನಾಥ್ ಅವರು ಗೋವಾದಲ್ಲಿ ನಡೆದ ಸಭೆಯೊಂದರಲ್ಲಿ ಭಾಗವಹಿಸಿ ಇನ್ನಿತರ ನಾಲ್ವರೊಂದಿಗೆ ಇನ್ನೋವಾ ಕಾರಿನಲ್ಲಿ ಉಡುಪಿಗೆ ಮರಳುತ್ತಿದ್ದರು. ಈ ವೇಳೆ ಉಡುಪಿಯತ್ತ ಸಾಗುತ್ತಿದ್ದ ಖಾಸಗಿ ಬಸ್ ಚಾಲಕ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ, ಹಿಂಬದಿಯಿಂದ ಬರುತ್ತಿದ್ದ ಇನ್ನೋವಾ ಕಾರು ನಿಯಂತ್ರಣ ತಪ್ಪಿ ಬಸ್‌ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಮಂಜುನಾಥ್ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಉಳಿದ ನಾಲ್ವರು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಹುಲಿವೇಷಧಾರಿಗಳಿಗೆ ಬಣ್ಣ ಹಚ್ಚುವುದು ಹಾಗೂ ಆಕರ್ಷಕ ಅಲಂಕಾರ ಮಾಡುವ ಕಲೆಯಲ್ಲಿ ಮಂಜುನಾಥ್ ಅವರು ವಿಶೇಷ ಪರಿಣಿತಿ ಹೊಂದಿದ್ದರು. ಅವರ ಕಲಾಸೇವೆ ಮತ್ತು ಸೃಜನಶೀಲತೆಯಿಂದ ಕರಾವಳಿ ಭಾಗದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದರು.
ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.



























