ಮಂಗಳೂರು: ಮಂಗಳವಾರ ಬೆಳಗ್ಗಿನಿಂದ ನಾಪತ್ತೆಯಾಗಿದ್ದ ಕೊಣಾಜೆ ಉರುಮಣೆ ನಿವಾಸಿ ಮುಹಮ್ಮದ್ ಅಶ್ರಫ್ ಮಾಲಿಕಿ (45) ಎಂಬವರ ಮೃತದೇಹ ಗುರುಪುರ ಹೊಳೆಯಲ್ಲಿ ಬುಧವಾರ ಸಂಜೆ ಪತ್ತೆಯಾಗಿದೆ.
ಇತ್ತೀಚೆಗಷ್ಟೇ ಹೊಸ ಮನೆ ನಿರ್ಮಾಣ ಮಾಡಿದ್ದ ಅಶ್ರಫ್ ಅವರು ಕೆಲಸ ಕಳೆದುಕೊಂಡು ಕೆಲದಿನಗಳಿಂದ ಮನೆಯಲ್ಲೇ ಇದ್ದರು ಎನ್ನಲಾಗಿದೆ. ಮಂಗಳವಾರ ಬೆಳಗ್ಗೆ ಮನೆಯಿಂದ ಹೊರಟಿದ್ದ ಅಶ್ರಫ್ ಅವರು ರಾತ್ರಿಯಾದರೂ ಮನೆಗೆ ಬಾರದಿದ್ದ ಕಾರಣ ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಇಂದು ಬೆಳಗ್ಗೆ ದ್ವಿಚಕ್ರ ವಾಹನವೊಂದು ಗುರುಪುರ ಸೇತುವೆ ಸಮೀಪ ಇರುವುದನ್ನು ಗಮನಿಸಿದ ಸಾರ್ವಜನಿಕರು, ಅದರ ಫೋಟೊ ಸಹಿತ ವಾಹನದ ವಿವರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದನ್ನು ಕಂಡು ಮನೆಮಂದಿ ಬೆಳಗ್ಗೆ ಸ್ಥಳಕ್ಕೆ ಆಗಮಿಸಿದ್ದರು. ನದಿಯಲ್ಲಿ ಹುಡುಕಾಟ ನಡೆಸಿದಾಗ ಸಂಜೆಯ ವೇಳೆ ಅವರ ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ಬಜ್ಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


























