ಬೆಳ್ತಂಗಡಿ: ಗುರುವಾಯನಕೆರೆ ಸಮೀಪದ ಖಾಸಗಿ ವಿದ್ಯುತ್ ಸಬ್‌ಸ್ಟೇಷನ್ ಜಾಗದಲ್ಲಿ 27 ವರ್ಷದ ಯುವಕನ ಮೃತದೇಹ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ಮೃತನನ್ನು ತಣ್ಣೀರುಪಂತ ಗ್ರಾಮದ ಕಲ್ಲೇರಿ ಜನತಾ ಕಾಲೋನಿ ನಿವಾಸಿ ಶರೀಫ್ ಕೆ. ಅವರ ಪುತ್ರ ಮುಸ್ತಾಕ್ (27) ಎಂದು ಗುರುತಿಸಲಾಗಿದೆ. ಅವರು ಚಾಲಕರಾಗಿ ಕೆಲಸ ಮಾಡುತ್ತಿದ್ದರು.
ಕುಟುಂಬದವರ ಮಾಹಿತಿ ಪ್ರಕಾರ, ಜೂನ್ 30ರಂದು ಮುಸ್ತಾಕ್ ಅವರನ್ನು ಲಾರಿ ಕೆಲಸದ ನಿಮಿತ್ತ ಮದ್ದಡ್ಕಕ್ಕೆ ಅವರ ತಮ್ಮ ಮುನಾಸೀರ್ ಕರೆದುಕೊಂಡು ಹೋಗಿದ್ದರು. ಬಳಿಕ ಗುರುವಾಯನಕೆರೆ ಸಮೀಪದ ಖಾಸಗಿ ವಿದ್ಯುತ್ ಸಬ್‌ಸ್ಟೇಷನ್ ಮುಂಭಾಗದ ತಡೆಗೋಡೆಯ ಇಳಿಜಾರು ಪ್ರದೇಶದಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಮೃತನ ತಂದೆ ಶರೀಫ್ ಅವರು, ತಮ್ಮ ಪುತ್ರನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಪೊಲೀಸರನ್ನು ಆಗ್ರಹಿಸಿದ್ದಾರೆ. ಮೃತದೇಹ ಪತ್ತೆಯಾದ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ಹಾಗೂ ಭದ್ರತಾ ಸಿಬ್ಬಂದಿ ಇಲ್ಲದಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯ ಎಸ್‌ಐ ಆನಂದ್ ಹಾಗೂ ವೈಜ್ಞಾನಿಕ ತನಿಖಾ (SOCO) ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಸಾವಿನ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.


























