ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ರೈ ಅವರು ಬುಧವಾರ ಬನ್ನೂರು ಗ್ರಾಮದಲ್ಲಿರುವ ದಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ದಿಡೀರ್ ಭೇಟಿ ನೀಡಿ ಅಲ್ಲಿನ ಆಹಾರದ ಗುಣಮಟ್ಟ ಹಾಗೂ ಶುಚಿತ್ವವನ್ನು ಪರಿಶೀಲಿಸಿದರು.
ಬನ್ನೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಶಾಸಕ ಅಶೋಕ್ ರೈ ಅವರು ಯಾವುದೇ ಪೂರ್ವ ಸೂಚನೆ ನೀಡದೆ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿದರು. ನೇರವಾಗಿ ಅಡುಗೆಮನೆಗೆ ತೆರಳಿದ ಅವರು ವಾರ್ಡನ್ ಜೊತೆ ಮಾತುಕತೆ ನಡೆಸಿ, ಅಂದು ಮಧ್ಯಾಹ್ನದ ಊಟಕ್ಕಾಗಿ ಸಿದ್ಧಪಡಿಸಲಾಗಿದ್ದ ಆಹಾರವನ್ನು ಪರಿಶೀಲಿಸಿದರು.
ಅಡುಗೆಮನೆಯಲ್ಲಿದ್ದ ಸಾಂಬಾರವನ್ನು ಸ್ವತಃ ಸವಿದು ಅದರ ರುಚಿ ಮತ್ತು ಗುಣಮಟ್ಟವನ್ನು ಪರಿಶೀಲಿಸಿದ ಶಾಸಕರು, ಪ್ರತಿದಿನವೂ ಇದೇ ರೀತಿಯ ಪೌಷ್ಟಿಕ ಆಹಾರವನ್ನು ವಿದ್ಯಾರ್ಥಿನಿಯರಿಗೆ ನೀಡಲಾಗುತ್ತದೆಯೇ ಎಂದು ವಾರ್ಡನ್ ಅವರನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಾರ್ಡನ್, ಪ್ರತಿದಿನ ವಿವಿಧ ಬಗೆಯ ಮೆನು ಅನುಸರಿಸಿ ಉತ್ತಮ ಹಾಗೂ ಪೌಷ್ಟಿಕ ಆಹಾರವನ್ನು ವಿದ್ಯಾರ್ಥಿನಿಯರಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಆಹಾರದ ಗುಣಮಟ್ಟ ಮತ್ತು ಅಡುಗೆಮನೆಯ ಶುಚಿತ್ವದಿಂದ ತೃಪ್ತರಾದ ಶಾಸಕ ಅಶೋಕ್ ರೈ, “ಇಂದಿನ ಆಹಾರ ಉತ್ತಮವಾಗಿದೆ. ಮತ್ತೊಮ್ಮೆ ದಿಡೀರ್ ಭೇಟಿ ನೀಡಿ ಪರಿಶೀಲಿಸುತ್ತೇನೆ” ಎಂದು ಹೇಳಿ ಸಿಬ್ಬಂದಿಯನ್ನು ಅಭಿನಂದಿಸಿದರು.
ಶಾಸಕರ ಮಾತು: “ಹಾಸ್ಟೆಲ್‌ಗೆ ಭೇಟಿ ನೀಡಿ ಆಹಾರ ಮತ್ತು ಶುಚಿತ್ವವನ್ನು ಪರಿಶೀಲಿಸಿದ್ದೇನೆ. ಸಿದ್ಧಪಡಿಸಿದ್ದ ಆಹಾರವನ್ನು ಸವಿದು ನೋಡಿದಾಗ ಅದರ ಗುಣಮಟ್ಟ ಉತ್ತಮವಾಗಿತ್ತು. ಸರ್ಕಾರ ವಿದ್ಯಾರ್ಥಿಗಳಿಗೆ ಉತ್ತಮ ಆಹಾರ ಒದಗಿಸಲು ವಿಶೇಷ ನಿರ್ದೇಶನ ನೀಡಿದೆ. ಪುತ್ತೂರು ಕ್ಷೇತ್ರದ ಎಲ್ಲ ಸರ್ಕಾರಿ ಹಾಸ್ಟೆಲ್‌ಗಳು, ಶಾಲೆಗಳು ಹಾಗೂ ಅಂಗನವಾಡಿಗಳಿಗೆ ದಿಡೀರ್ ಭೇಟಿ ನೀಡಿ ಆಹಾರ ಮತ್ತು ಮೂಲಸೌಕರ್ಯಗಳ ಪರಿಶೀಲನೆ ಮುಂದುವರಿಸುತ್ತೇವೆ. ವಿದ್ಯಾರ್ಥಿಗಳ ಆರೋಗ್ಯ ಮತ್ತು ಕಲ್ಯಾಣಕ್ಕೆ ಯಾವುದೇ ರಾಜಿ ಇರಬಾರದು,” ಎಂದು ಶಾಸಕ ಅಶೋಕ್ ರೈ ಹೇಳಿದರು.


























