ಮಂಗಳೂರು, ಜು. 1: ನಗರದ ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಗರೋಡಿ ಸಮೀಪದ ಮಾರಿಯಲ್ ಹೌಸ್‌ನಲ್ಲಿ ಬುಧವಾರ ಮುಂಜಾನೆ ಸುಮಾರು 4.45ರಿಂದ 5.00 ಗಂಟೆಯ ನಡುವೆ ಭಾರೀ ಮಳೆಯಿಂದ ಕಾಂಪೌಂಡ್ ಗೋಡೆ ಕುಸಿದು ನಾಲ್ಕು ಬಾಡಿಗೆ ಮನೆಗಳಿಗೆ ಹಾನಿಯಾಗಿದೆ ಮತ್ತು ಮೂವರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಕಾಂಪೌಂಡ್ ಗೋಡೆಯ ಕೆಳಭಾಗದಲ್ಲಿದ್ದ ನಾಲ್ಕು ಕುಟುಂಬಗಳ ಮನೆಗಳ ಹಿಂಭಾಗದ ಗೋಡೆಗಳು ಕುಸಿದಿದ್ದು, ಅವುಗಳಲ್ಲಿ ಎರಡು ಕುಟುಂಬಗಳು ಹೆಚ್ಚು ತೊಂದರೆಗೆ ಒಳಗಾಗಿವೆ.
ಮೊದಲ ಕುಟುಂಬದ ಲಾಲ್‌ಬಾಬು (37) ಹಾಗೂ ಪತ್ನಿ ಇಂದು (34) ಮೂಲತಃ ಬಿಹಾರ ರಾಜ್ಯದವರಾಗಿದ್ದು, ಕಳೆದ ಎಂಟು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದರು. ಇವರಿಗೆ ಅಲ್ಕಾ (14), ಅನುಷ್ಕಾ (11), ಅನಾಮಿಕಾ (7) ಹಾಗೂ ತನು (3) ಎಂಬ ನಾಲ್ವರು ಪುತ್ರಿಯರಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಲಾಲ್‌ಬಾಬು, ಇಂದು ಹಾಗೂ ಇಬ್ಬರು ಮಕ್ಕಳು ಸುರಕ್ಷಿತವಾಗಿ ರಕ್ಷಿಸಲ್ಪಟ್ಟಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಇಬ್ಬರು ಬಾಲಕಿಯರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಎರಡನೇ ಕುಟುಂಬದ ಬಾಲಕೃಷ್ಣ (40) ಹಾಗೂ ಪತ್ನಿ ಶಾಂತಾ (35) ಮೂಲತಃ ಉಡುಪಿ ಜಿಲ್ಲೆಯವರಾಗಿದ್ದು, ಕಳೆದ ಎಂಟು ತಿಂಗಳಿನಿಂದ ಈ ಮನೆಯಲ್ಲಿ ವಾಸಿಸುತ್ತಿದ್ದರು. ಬಾಲಕೃಷ್ಣ ಅವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಶಾಂತಾ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಗಾಯಾಳುಗಳು ಮತ್ತು ಸಂತ್ರಸ್ತರನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಭೇಟಿ ನೀಡಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆಸ್ಪತ್ರೆಯ ಅಧಿಕೃತ ವೈದ್ಯಕೀಯ ವರದಿ ಬಳಿಕ ಸಾವು-ನೋವಿನ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ.


























