ಇತ್ತೀಚಿನ ದಿನಗಳಲ್ಲಿ ಮದುವೆಯಾದ ಜೋಡಿಗಳು ತಮ್ಮ ವಾಹನಗಳ ನೋಂದಣಿ ಸಂಖ್ಯೆ ಫಲಕದ ಮೇಲೆ “ಜಸ್ಟ್ ಮ್ಯಾರೀಡ್” ಎಂಬ ಫಲಕ ಅಳವಡಿಸಿ ಮೂಲ ನೋಂದಣಿ ಸಂಖ್ಯೆಯನ್ನು ಮುಚ್ಚುತ್ತಿರುವ ಘಟನೆಗಳು ಹೆಚ್ಚಾಗಿವೆ. ಇದು ಸಂಚಾರ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಅಗತ್ಯ ಸಂದರ್ಭದಲ್ಲಿ ವಾಹನವನ್ನು ಗುರುತಿಸಲು ತೊಂದರೆಯಾಗುತ್ತದೆ.
ಈ ಕುರಿತು ಹಿಂದೂ ಸಂಘಟನೆಗಳ ಮುಖಂಡ ಅಜಿತ್ ರೈ ಹೊಸಮನೆ ಅವರು ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ವಿಷಯವನ್ನು ತಂದಿದ್ದರು. ದೂರಿನ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ಪುತ್ತೂರಿನಲ್ಲಿ ಸಂಚರಿಸುತ್ತಿದ್ದ ವಾಹನವೊಂದರ ಮೇಲಿದ್ದ “ಜಸ್ಟ್ ಮ್ಯಾರೀಡ್” ಫಲಕವನ್ನು ತೆರವುಗೊಳಿಸಿ, ವಾಹನ ಸವಾರರಿಗೆ ಎಚ್ಚರಿಕೆ ನೀಡಿದರು.
ಸಂಚಾರ ನಿಯಮಗಳನ್ನು ಉಲ್ಲಂಘಿಸುವ ರೀತಿಯಲ್ಲಿ ನೋಂದಣಿ ಸಂಖ್ಯೆಯನ್ನು ಮುಚ್ಚುವ ಯಾವುದೇ ಫಲಕ ಅಥವಾ ಅಲಂಕಾರವನ್ನು ಅಳವಡಿಸಬಾರದು ಎಂದು ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.


























