ಮಂಗಳೂರಿನ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಗುರುವಾರ ಮುಂಜಾನೆ ಗಾಂಜಾ ಎಸೆದ ಅಸಾಮಿಯನ್ನು ಕೆಎಸ್ ಐಎಸ್‌ಎಫ್ ಸಿಬ್ಬಂದಿ ಬೆನ್ನಟ್ಟಿ ಹಿಡಿಯುವಲ್ಲಿ ಸಫಲರಾಗಿದ್ದಾರೆ.
ಮೂಲತಃ ಬಂಟ್ವಾಳ ಕೊಳತ್ತಮಜಲು ಕೋಳಕೇರಿ ನಿವಾಸಿ, ಪ್ರಸ್ತುತ ಉರ್ವ ನಿವಾಸಿ ತಿಲಕ್‌ರಾಜ್ ಪ್ರಕರಣದ ಆರೋಪಿ.
ಗುರುವಾರ ನಸುಕಿನ ಜಾವ 4.20ರ ಸುಮಾರಿಗೆ ಕಾರಾಗೃಹದ ಒಳಗಿರುವ ಅಡುಗೆ ಮನೆ ಪ್ರದೇಶಕ್ಕೆ ಅನುಮಾನಾಸ್ಪದ ವಸ್ತುವನ್ನು ಅಪರಿಚಿತ ವ್ಯಕ್ತಿ ಎಸೆಯುವುದನ್ನು ಕೇಂದ್ರ ಕೈಗಾರಿಕಾ ಭದ್ರತಾಪಡೆ (ಕೆಎಸ್‌ಐಎಸ್‌ಎಫ್) ಸಿಬ್ಬಂದಿ ಗಮನಿಸಿದ್ದರು. ಭದ್ರತಾ ಪಡೆಯ ಆರ್‌ಪಿಸಿ ಕಿರಣ್ ಗಮನಿಸಿ, ತಕ್ಷಣ ಎಎಸ್‌ಐ ಕಿರಣ್ ಅಂಬಿಗರಿಗೆ ಮಾಹಿತಿ ನೀಡಿದ್ದಾರೆ.
ಅದರಂತೆ ಆರೋಪಿಯನ್ನು 500 ಮೀಟರ್ ದೂರಕ್ಕೆ ಬೆನ್ನಟ್ಟಿಕೊಂಡು ಹೋಗಿ ಆರೋಪಿ ತಿಲಕ್‌ರಾಜ್‌ನನ್ನು ಹಿಡಿದಿದ್ದಾರೆ. ಬಳಿಕ ಉಸ್ತುವಾರಿ ಅಧಿಕಾರಿ ಪೊಲೀಸ್ ನಿರೀಕ್ಷಕ ಸುಭಾಷ್ ಅವರಿಗೆ ಮಾಹಿತಿ ನೀಡಿದ್ದು, ಅವರು ಬಂದು ವಿಚಾರಣೆ ನಡೆಸಿದಾಗ ಆರೋಪಿ ಸತ್ಯ ಬಾಯಿ ಬಿಟ್ಟಿದ್ದಾನೆ.
ಮೂಡುಶೆಡ್ಡೆ ನಿವಾಸಿ ಕಿರಣ್ ಎಂಬ ವ್ಯಕ್ತಿಯು ಆರೋಪಿಗೆ ಗಾಂಜಾ, ಲೈಟರ್, ಗಾಂಜಾ ಸೇದುವ ಪೇಪರ್‌ಗಳನ್ನು ನೀಡಿ ಈ ವಸ್ತುಗಳನ್ನು ಕಾರಾಗೃಹದ ಒಳಗೆ ಎಸೆಯಬೇಕು ಎಂದು ಹೇಳಿ ಈ ಕೃತ್ಯ ಎಸಗಲು 2 ಸಾವಿರ ರೂ. ನೀಡಿದ್ದನು.
ಇದಾದ ಬಳಿಕ ಕಾರಾಗೃಹದಲ್ಲಿ ಬಂಧಿಯಾಗಿರುವ ಲಾಯ್ ವೇಗಸ್ ಎಂಬಾತನ ಮೊಬೈಲ್ ನಂಬರ್ ನೀಡಿದ್ದು, ಆತನ ಸೂಚನೆಯಂತೆ ಅವನು ಹೇಳಿದ ಜಾಗಕ್ಕೆ (ಕಾರಾಗೃಹ ಅಡುಗೆ ಮನೆ) ಮಾದಕ ವಸ್ತುಗಳನ್ನು ಎಸೆದಿರುವುದಾಗಿ ಆರೋಪಿ ಬರ್ಕೆ ಪೊಲಿಸರಲ್ಲಿ ವಿಚಾರಣೆ ವೇಳೆ ತಿಳಿಸಿದ್ದನು.
ಈ ಪ್ರಕರಣದಲ್ಲಿ ಆರೋಪಿಗಳಾದ ತಿಲಕ್‌ರಾಜ್ ಮತ್ತು ಲಾಯ್ ವೇಗಸ್ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಮತ್ತು ಕರ್ನಾಟಕ ಕಾರಾಗೃಹಗಳ ತಿದ್ದುಪಡಿ-2022 ಕಾಯ್ದೆ 42ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕಾರಾಗೃಹ ಅಧೀಕ್ಷಕ ಶರಣ ಬಸಪ್ಪ, ಕೆಎಸ್‌ಐಎಸ್ ಎಫ್ ಪೊಲೀಸ್ ಇನ್‌ಸ್ಪೆಕ್ಟರ್ ಸುಭಾಷ್ ಹಾಗೂ ಕಾರಾಗೃಹ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು.

























