ಸುಳ್ಯ: ಜಾಲ್ಸೂರು ಗ್ರಾಮದ ಮಾಬಲಡ್ಕ ನದಿತೀರದಲ್ಲಿ ಯುವಕ ಮತ್ತು ಯುವತಿಯೊಬ್ಬರು ಇದ್ದ ವೇಳೆ ನಡೆದ ವಾಗ್ವಾದ ಹಲ್ಲೆಗೆ ತಿರುಗಿದ ಘಟನೆ ಜೂನ್ 30ರಂದು ನಡೆದಿದ್ದು, ಈ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಯನಗರ ನಿವಾಸಿ ಭವಿಷ್ ನೀಡಿದ ದೂರಿನ ಪ್ರಕಾರ, ತಾನು ತನ್ನ ಸ್ನೇಹಿತೆಯೊಂದಿಗೆ ನದಿತೀರದಲ್ಲಿ ಫೋಟೋ ತೆಗೆಯುತ್ತಿದ್ದ ವೇಳೆ ಮೂವರು ಸ್ಥಳೀಯರು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಳಿಕ ತಾನು ಮೋಟಾರ್‌ಸೈಕಲ್‌ನಲ್ಲಿ ತೆರಳಲು ಮುಂದಾದಾಗ ವಾಹನವನ್ನು ತಡೆದು ಕೀ ಕಸಿದುಕೊಂಡು ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಕೈ ಮತ್ತು ಮುಖಕ್ಕೆ ಗಾಯಗಳಾಗಿದ್ದು, ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ದೂರಿನ ಆಧಾರದ ಮೇಲೆ ಪೊಲೀಸರು ಜನಾರ್ಧನ, ವಸಂತ ಹಾಗೂ ಅರವಿಂದ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಇತ್ತ ಸ್ಥಳೀಯ ನಿವಾಸಿಗಳಾದ ವಸಂತ ಅವರು, ಯುವಕ ಮತ್ತು ಯುವತಿ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದರು. ಅದನ್ನು ಪ್ರಶ್ನಿಸಿ ಅಲ್ಲಿಂದ ತೆರಳುವಂತೆ ತಿಳಿಸಿದಾಗ ಯುವಕನೇ ಮೊದಲು ತಮ್ಮಲ್ಲೊಬ್ಬರ ಮೇಲೆ ಹಲ್ಲೆ ನಡೆಸಿದ್ದು, ಈ ವೇಳೆ ತುಟಿಗೆ ಗಾಯವಾಗಿ ರಕ್ತಸ್ರಾವವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಎರಡೂ ಕಡೆಯಿಂದ ಪರಸ್ಪರ ಆರೋಪಗಳು ಕೇಳಿಬಂದಿದ್ದು, ಪ್ರಕರಣದ ಕುರಿತು ಸುಳ್ಯ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

























