ನೆಲ್ಯಾಡಿ: ಕಡಬ ತಾಲೂಕಿನ ಕೊಣಾಲು ಗ್ರಾಮದ ಪಾಂಡಿಬೆಟ್ಟು ಎಂಬಲ್ಲಿ ರಬ್ಬರ್ ತೋಟದ ತೆರೆದ ಸ್ಥಳದಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿದ್ದಾರೆ.
ಆ.18ರಂದು ಮುಂಜಾನೆ ಸುಮಾರು 1 ಗಂಟೆ ವೇಳೆಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ಉಪ್ಪಿನಂಗಡಿ ಪೊಲೀಸ್ ಠಾಣೆಯ ಪಿಎಸ್‌ಐ ಕೌಶಿಕ್ ಬಿ.ಸಿ. ಹಾಗೂ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದರು.
ಟಾರ್ಚ್‌ಲೈಟ್‌ಗಳ ಬೆಳಕಿನ ಸಹಾಯದಿಂದ ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸರು ತೆರಳುತ್ತಿದ್ದಂತೆ, ಅಲ್ಲಿದ್ದ ಕೆಲವರು ಓಡಿಹೋಗಲು ಯತ್ನಿಸಿದ್ದಾರೆ.
ಈ ವೇಳೆ ಕೊಣಾಲು ನಿವಾಸಿಗಳಾದ ಸುರೇಶ ಹಾಗೂ ಪ್ರವೀಣ ಎಂಬ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನಾ ಸ್ಥಳದಿಂದ ಅಂದಾಜು ರೂ.5,150 ಮೌಲ್ಯದ 7 ಹುಂಜಗಳು, ಜೂಜಾಟಕ್ಕೆ ಬಳಸಿದ್ದ ರೂ.1,700 ನಗದು ಹಾಗೂ ರೂ.300 ಮೌಲ್ಯದ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


























