ನೆಲ್ಯಾಡಿ: ಮನೆಯವರು ಚಚ್೯ಗೆ ಹಬ್ಬಕ್ಕೆ ತೆರಳಿದ್ದ ವೇಳೆ ಮನೆಯಿಂದ ಅಂದಾಜು 6 ಲಕ್ಷ ರೂ.ಮೌಲ್ಯದ 75 ಗ್ರಾಂ ಚಿನ್ನಾಭರಣ ಕಳವುಗೊಂಡಿರುವ ಘಟನೆ ಕಡಬ ತಾಲೂಕಿನ ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿ ಅ.1ರಂದು ರಾತ್ರಿ ನಡೆದಿದೆ.
ಅಡ್ಡಹೊಳೆಯ ಕಕುತ್ತಿಲ್ ದಿ.ತೋಮಸ್ ಕೆ.ಎಸ್. ಅವರ ಪತ್ನಿ ಶಾಲಿನಿ (52) ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಅ.1ರಂದು ಸಂಜೆ 6 ಗಂಟೆಗೆ ಅವರು ಮನೆಗೆ ಬೀಗ ಹಾಕಿ ಅಡ್ಡಹೊಳೆ ಚರ್ಚ್‌ನಲ್ಲಿ ನಡೆಯುತ್ತಿದ್ದ ಹಬ್ಬಕ್ಕೆ ಹೋಗಿದ್ದು ರಾತ್ರಿ 10 ಗಂಟೆಗೆ ಮನೆಗೆ ಹಿಂತಿರುಗಿ ಬಂದ ವೇಳೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಮನೆಯ ಹಿಂಬದಿ ಬಾಗಿಲಿನ ಬೀಗವನ್ನು ಬಲವಂತವಾಗಿ ಮುರಿದು ಕಳ್ಳರು ಮನೆಯೊಳಗೆ ಪ್ರವೇಶಿಸಿದ್ದು ಬ್ಯಾಗ್‌ನಲ್ಲಿ ಇರಿಸಲಾಗಿದ್ದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ವಸ್ತುಗಳಲ್ಲಿ 25 ಗ್ರಾಂ ತೂಕದ ಮೂರು ಚಿನ್ನದ ಬಳೆಗಳು, 6 ಗ್ರಾಂ ತೂಕದ ಚಿನ್ನದ ಬ್ರಾಸ್ ಲೈಟ್, 20 ಗ್ರಾಂ ತೂಕದ ಚಿನ್ನದ ನೆಕ್ಲೆಸ್ ಹಾಗೂ 24 ಗ್ರಾಂ ತೂಕದ ಚಿನ್ನದ ಸರ ಸೇರಿವೆ. ಒಟ್ಟು ಸುಮಾರು 75 ಗ್ರಾಂ ತೂಕದ, ಅಂದಾಜು 6 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವುಗೊಂಡಿದೆ ಎಂದು ಶಾಲಿನಿ ಅವರು ಉಪ್ಪಿನಂಗಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


























