ಬೆಳ್ತಂಗಡಿ: ತಾಲೂಕಿನ ನೆರಿಯ ಗ್ರಾಮದ ನೆರಿಯಕಾಡು ಪ್ರದೇಶದಲ್ಲಿರುವ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಹೆಬ್ಬಲಸು ಮರ ಕಡಿದು ಸಾಗಿಸಲು ಯತ್ನಿಸುತ್ತಿದ್ದ ಪ್ರಕರಣವನ್ನು ಬೆಳ್ತಂಗಡಿ ವಲಯ ಅರಣ್ಯ ಇಲಾಖೆ ಪತ್ತೆಹಚ್ಚಿದೆ.
ಆರ್‌ಎಫ್‌ಒ ತ್ಯಾಗರಾಜ್ ನೇತೃತ್ವದ ಅರಣ್ಯ ಇಲಾಖೆ ತಂಡ ದಾಳಿ ನಡೆಸಿದ ವೇಳೆ, ಅಂಬ್ಲೆ ನಿವಾಸಿ ರಾಜಪ್ಪ ಗೌಡ ಎಂಬಾತ ಹೆಬ್ಬಲಸು ಮರವನ್ನು ಅಕ್ರಮವಾಗಿ ಕಡಿದು ತುಂಡರಿಸುತ್ತಿದ್ದಾನೆ ಎಂಬುದು ಬೆಳಕಿಗೆ ಬಂದಿದೆ.
ಸ್ಥಳ ಪರಿಶೀಲನೆ ವೇಳೆ ಒಂದು ಹೆಬ್ಬಲಸು ಮರವನ್ನು ಕಡಿದು 40 ಹಲಗೆಗಳು ಹಾಗೂ 3 ಮರದ ದಿಮ್ಮಿಗಳನ್ನಾಗಿ ಮಾಡಿರುವುದು ಪತ್ತೆಯಾಗಿದೆ. ಅಧಿಕಾರಿಗಳು ಎಲ್ಲಾ ಮರದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಜುಲೈ 2ರಂದು ನ್ಯಾಯಾಲಯದ ಅನುಮತಿ ಪಡೆದ ಬಳಿಕ ಬೆಳ್ತಂಗಡಿ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆಯನ್ನು ಮುಂದುವರಿಸಿದೆ.


























