ಪುತ್ತೂರು: ಪ್ರತಿಕೂಲ ಹವಾಮಾನದ ಕಾರಣದಿಂದ ತಾತ್ಕಾಲಿಕವಾಗಿ ಇಳಿಸಲಾಗಿದ್ದ ಪುತ್ತೂರಿನ ಬೃಹತ್ ರಾಷ್ಟ್ರಧ್ವಜವು ಶನಿವಾರ ಮತ್ತೆ ಧ್ವಜಸ್ತಂಭದಲ್ಲಿ ಆರೋಹಣಗೊಂಡಿದೆ.
ನಗರದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯ ಮುಂಭಾಗದ ನೆಲ್ಲಿಕಟ್ಟೆ ಪಾರ್ಕ್ ನಲ್ಲಿರುವ 150 ಅಡಿ ಎತ್ತರದ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜವು ಪುನಃ ಹಾರಾಡತೊಡಗಿದೆ. ಕಳೆದ ಒಂದೂವರೆ ತಿಂಗಳ ಹಿಂದೆ ಮಳೆ ಹಾಗೂ ಬಿರುಗಾಳಿಯ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಧ್ವಜಕ್ಕೆ ಹಾನಿಯಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಅದನ್ನು ಇಳಿಸಲಾಗಿತ್ತು.
ಈಗ ಹವಾಮಾನ ಪರಿಸ್ಥಿತಿಯನ್ನು ಪರಿಗಣಿಸಿ, ಗಾಳಿಯ ಒತ್ತಡವನ್ನು ತಡೆದುಕೊಳ್ಳುವ ಅನುಕೂಲಕ್ಕಾಗಿ ತುಸು ಚಿಕ್ಕ ಗಾತ್ರದ ರಾಷ್ಟ್ರಧ್ವಜವನ್ನು ಮೇ 30ರಂದು ಆರೋಹಣ ಮಾಡಲಾಗಿದೆ.
ರಾಜ್ಯದ ಅತೀ ಎತ್ತರದ ರಾಷ್ಟ್ರಧ್ವಜಗಳಲ್ಲಿ ಒಂದಾದ ಈ ಧ್ವಜವು ಮತ್ತೆ ಹಾರಾಡತೊಡಗಿದ್ದು, ಪರಿಸರಕ್ಕೆ ಮತ್ತಷ್ಟು ಮೆರುಗು ನೀಡಿದೆ.




























