ಮಂಗಳೂರು, ಜು. 14: ಹಲವು ಪ್ರಕರಣಗಳಲ್ಲಿ ನ್ಯಾಯಾಲಯದಿಂದ ವಾರಂಟ್ ಜಾರಿಯಾಗಿದ್ದರೂ ಹಾಜರಾಗದೆ, ಬುರ್ಖಾ ಧರಿಸಿ ಪೊಲೀಸರ ಕಣ್ಣಪ್ಪಿಸಿ ತಲೆಮರೆಸಿಕೊಂಡು ಓಡಾಡುತ್ತಿದ್ದ ಕುಖ್ಯಾತ ರೌಡಿ ಆಸಾಮಿ ಇಮ್ರಾನ್ @ ಸುರ್ಮೋ ಇಮ್ರಾನ್‌ನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಇಮ್ರಾನ್ (ದಿ. ಹಸನಬ್ಬ ಅವರ ಪುತ್ರ), ಉಳ್ಳಾಲದ ಮೆಲಂಗಡಿ ದರ್ಗಾ ರಸ್ತೆಯ ನಿವಾಸಿಯಾಗಿದ್ದು, ಈತನ ವಿರುದ್ಧ ಮಂಗಳೂರು ನಗರ ಮತ್ತು ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 23 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಹಲವು ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಜಾರಿಯಾಗಿದ್ದ ವಾರಂಟ್‌ಗಳಿದ್ದರೂ ಆತ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಆರೋಪಿಯು ಬುರ್ಖಾ ಧರಿಸಿ ಸಂಚರಿಸುತ್ತಿದ್ದ ಎನ್ನಲಾಗಿದೆ. ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಉಳ್ಳಾಲ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯ ಕ್ರೈಂ ನಂ. 118/2017 ಹಾಗೂ 422/2017, ಬರ್ಕೆ ಪೊಲೀಸ್ ಠಾಣೆಯ ಕ್ರೈಂ ನಂ. 05/2018 ಮತ್ತು 06/2018 ಸೇರಿದಂತೆ ಕೊಲೆ ಯತ್ನ, ಹಲ್ಲೆ, ಜೀವ ಬೆದರಿಕೆ, ಸಾರ್ವಜನಿಕ ಸೇವೆಯಲ್ಲಿದ್ದ ಅಧಿಕಾರಿಗಳ ಮೇಲೆ ಹಲ್ಲೆ ಸೇರಿದಂತೆ ವಿವಿಧ ಗಂಭೀರ ಪ್ರಕರಣಗಳು ದಾಖಲಾಗಿವೆ.
ಆರೋಪಿಯನ್ನು ಕಾನೂನು ಪ್ರಕ್ರಿಯೆಯಂತೆ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


























