ಮಂಗಳೂರು: ಒಮಾನ್ ಕರಾವಳಿಯ ಸಮೀಪ ವಾಣಿಜ್ಯ ಹಡಗಿನ ಮೇಲೆ ನಡೆದ ಕ್ಷಿಪಣಿ ದಾಳಿಯ ಬಳಿಕ ಒಮಾನ್ ನೌಕಾಪಡೆಯು ರಕ್ಷಿಸಿದ 10 ಭಾರತೀಯರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ 25 ವರ್ಷದ ಯುವ ನಾವಿಕ ರಚನ್ ಬಿಳಿಯೂರು ರವರೂ ಸೇರಿದ್ದಾರೆ . ಪ್ರಸ್ತುತ ಅವರು ಒಮಾನ್‌ನಲ್ಲಿ ತಮ್ಮ ಶಿಪ್ಪಿಂಗ್ ಕಂಪನಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಸುರಕ್ಷಿತರಾಗಿದ್ದಾರೆ.
ಕಳೆದ ಮೂರು ವರ್ಷಗಳಿಂದ ಶಿಪ್ಪಿಂಗ್ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿರುವ ಈ ನಾವಿಕರು ಪ್ರಯಾಣಿಸುತ್ತಿದ್ದ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆದ ಪರಿಣಾಮ ಎಂಜಿನ್ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಸಿಬ್ಬಂದಿ ಜೀವ ರಕ್ಷಕ ದೋಣಿಯ ಮೂಲಕ ಹಡಗನ್ನು ತೊರೆದು ಹೊರಬಂದರು. ಬಳಿಕ ಒಮಾನ್ ನೌಕಾಪಡೆಯು ಎಲ್ಲಾ ಸಿಬ್ಬಂದಿಯನ್ನು ರಕ್ಷಿಸಿ ಸುರಕ್ಷಿತವಾಗಿ ತನ್ನ ನೆಲೆಗೆ ಕರೆದುಕೊಂಡು ಹೋಗಿದೆ.
ಬಂಟ್ವಾಳ ನಿವಾಸಿಯಾಗಿರುವ ಅವರು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಮುಂಬೈನಲ್ಲಿ ಮೆರೈನ್ ಕೋರ್ಸ್ ಮುಗಿಸಿ ಹಡಗು ಸೇವೆಗೆ ಸೇರಿದ್ದರು.
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದರಿಂದ ಕುಟುಂಬದವರು ಅವರ ಸುರಕ್ಷತೆಯ ಬಗ್ಗೆ ತೀವ್ರ ಆತಂಕದಲ್ಲಿದ್ದರು. ಪ್ರಯಾಣದ ವೇಳೆ ಹಡಗಿನ ಸಿಬ್ಬಂದಿ ಎದುರಿಸುತ್ತಿದ್ದ ಭಯ ಹಾಗೂ ಉದ್ವಿಗ್ನತೆಯ ಕುರಿತು ಅವರು ಆಗಾಗ ಕುಟುಂಬದವರಿಗೆ ಮಾಹಿತಿ ನೀಡುತ್ತಿದ್ದರು ಎಂದು ನಾವಿಕನ ಸಹೋದರ ತಿಳಿಸಿದ್ದಾರೆ.
“ಈಗ ಅವರು ಸುರಕ್ಷಿತರಾಗಿದ್ದಾರೆ ಎಂಬ ಸುದ್ದಿ ತಿಳಿದು ನಮಗೆ ನೆಮ್ಮದಿ ಸಿಕ್ಕಿದೆ. ಶೀಘ್ರದಲ್ಲೇ ಅವರು ಭಾರತಕ್ಕೆ ಸುರಕ್ಷಿತವಾಗಿ ಮರಳಲಿ ಎಂಬುದು ನಮ್ಮ ಆಶಯ” ಎಂದು ಕುಟುಂಬದವರು ತಿಳಿಸಿದ್ದಾರೆ.


























