ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 15ರ ಬಜತ್ತೂರು ಗಾಯದ ಬೆದ್ರೋಡಿಯಲ್ಲಿ ಆ.30 ರಂದು ಸಂಜೆ ಭೀಕರ ಅಪಘಾತ ಸಂಭವಿಸಿದ್ದು, ಕೆಟ್ಟು ಹೆದ್ದಾರಿ ಬದಿ ನಿಂತಿದ್ದ ಲಾರಿಗೆ ಪಿಕಪ್ ಡಿಕ್ಕಿಯಾಗಿದೆ. ಈ ವೇಳೆ ಲಾರಿ ದುರಸ್ಥಿ ಕೆಲಸದಲ್ಲಿ ನಿರತರಾಗಿದ್ದ ಬೆಂಗಳೂರು ಮೂಲದ ಇಬ್ಬರು ಮೆಕ್ಯಾನಿಕ್ ಗಳು ಸೇರಿ ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ.

ದಾವಣಗೆರೆ ಮೂಲದ ಮಧು (36) ಬೆಂಗಳೂರಿನಲ್ಲಿ ಮೆಕಾನಿಕ್ ಆಗಿರುವ ಮಹಮ್ಮದ್ ಆಫ್ಸಾನ್ (35) ಇವರ ಸಹಾಯಕರಾಗಿದ್ದ ಬೆಂಗಳೂರು ನಿವಾಸಿ ಅಬ್ದುಲ್ ರೆಹಮಾನ್ ( 25ವರ್ಷ ) ಮೃತ ದುರ್ದೈವಿಗಳು. ಕೆಟ್ಟು ನಿಂತಿದ್ದ ಲಾರಿಯ ಚಾಲಕ ಶಿವಮೊಗ್ಗ ಮೂಲದ ಆಸೀಫ್ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಅಬ್ದುಲ್ ರಹಿಮಾನ್ ಹಾಗೂ ಮಧುಸೂದನ್ ರವರು ಸ್ಥಳದಲ್ಲಿಯೇ ಮೃತಪಟ್ಟಿದ್ದು ಗಂಭೀರ ಗಾಯಗೊಂಡಿದ್ದ ಮಹಮ್ಮದ್ ಆಫ್ಸಾನ್ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ವರದಿಯಾಗಿದೆ.
ದುರಸ್ಥಿ ವೇಳೆ ಇವರೊಟ್ಟಿಗೆ ಇದ್ದ ಲಾರಿ ಚಾಲಕ ಆಸೀಫ್ ರವರು ಅಪಘಾತ ನಡೆಯುವುದಕ್ಕೆ ತುಸು ಮೊದಲು ಮಳೆ ಬರುತ್ತಿದಂತೆ ಅಲ್ಲಿಂದ ಲಾರಿಯ ಇನ್ನೊಂದು ಭಾಗಕ್ಕೆ ತೆರಳಿದ್ದುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪಿಕಪ್ ಚಾಲಕ ಎಸ್ಕೇಪ್, ಸ್ಥಳೀಯರ ಆಕ್ರೋಶ: ಅಪಘಾತವೆಸಗಿದ ಪಿಕಪ್ ಚಾಲಕ ಬೆಳ್ತಂಗಡಿ ಉರುವಾಲು ಗ್ರಾಮದ ಅಹ್ಮದ್ ಜಾಬೀರ್ ಎಂದು ಹೇಳಲಾಗಿದ್ದು ಈತ ಅಪಘಾತದಲ್ಲಿ ಮೃತಪಟ್ಟವರನ್ನು ಹಾಗೂ ಗಾಯಳುವನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಸ್ಥಳದಲ್ಲಿದ್ದು, ಆ ಬಳಿಕ ಎಸ್ಕೇಪ್ ಆಗಿರುವುದಾಗಿ ಹೇಳಲಾಗಿದೆ.

ಉಪ್ಪಿನಂಗಡಿಯಿಂದ ಬಂದ ಕೆಲವರು ಪಿಕಪ್ ಚಾಲಕನನ್ನು ವಾಹನವೊಂದರಲ್ಲಿ ಕರೆದುಕೊಂಡು ಹೋಗುವ ಮೂಲಕ ಆತನನ್ನು ಎಸ್ಕೇಪ್ ಮಾಡಿಸಿದ್ದಾರೆ ಎಂದು ಘಟನಾ ಸ್ಥಳದಲ್ಲಿದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಪೊಲೀಸರಿಗೂ ಮಾಹಿತಿ ನೀಡಿ, ಆತನ ಚಾಲನಾ ಪರವಾನಿಗೆಯನ್ನು ಪೊಲೀಸರ ವಶಕ್ಕೊಪ್ಪಿಸಿದರು. ಇದರಿಂದಾಗಿ ಸ್ಥಳದಲ್ಲಿ ತುಸು ಉದ್ರಿಕ್ತ ವಾತಾವರಣವೂ ನಿರ್ಮಾಣವಾಗಿತ್ತು ಎಂದು ವರದಿಯಾಗಿದೆ. ಅಪಘಾತಕ್ಕೆ ಪಿಕಪ್ ಚಾಲಕನ ಅಜಾಗರೂಕತೆಯೇ ಕಾರಣ ಎಂಬ ಆರೋಪವೂ ಕೇಳಿ ಬಂದಿದೆ.



























