ಪುತ್ತೂರು: ದ.ಕ ಜಿಲ್ಲೆಯಲ್ಲಿ ವಾರಂತ್ಯದ ಕರ್ಫ್ಯೂ ರದ್ದು ಪಡಿಸುವಂತೆ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಾರಾಂತ್ಯದ ಕರ್ಫ್ಯೂ ಹಲವು ತಿಂಗಳಿನಿಂದ ಜಾರಿಯಲ್ಲಿದ್ದು ಅವಶ್ಯಕ ಸಾಮಾಗ್ರಿಗಳ ವ್ಯಾಪಾರಸ್ಥರಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದರಿಂದಾಗಿ ಜನರಿಗೆ ತಮ್ಮ ದಿನನಿತ್ಯದ ವ್ಯವಹಾರವನ್ನು ನಡೆಸಲು ದಿನಕೂಲಿ ನೌಕರರಿಗೆ, ಆಟೋ ರಿಕ್ಷಾ ಚಾಲಕರು, ಬಸ್ ನೌಕರರು, ಸಣ್ಣಪುಟ್ಟ ಉದ್ಯಮ ಸೇರಿದಂತೆ ಉಳಿದ ವರ್ತಕರಿಗೆ ವ್ಯವಹಾರ ನಡೆಸಲು ಸಾಧ್ಯವಾಗದೇ, ತೀವ್ರ ಆರ್ಥಿಕ ಸಂಕಷ್ಟದಲ್ಲಿರುತ್ತಾರೆ.
ಪ್ರಸ್ತುತ ಕೋವಿಡ್ ದೃಢ ಪ್ರಮಾಣವು ಇಳಿಕೆಯಾಗಿದ್ದು, ಮತ್ತೂರಿನಲ್ಲಿ ದಿನದ ಸೋಂಕಿತರ ಪ್ರಮಾಣ ಅತೀ ಕಡಿಮೆ ಪ್ರಮಾಣದಲ್ಲಿರುತ್ತದೆ. ಅಲ್ಲದೇ, ಕಳೆದ 2 ಸಲದ ಕೋವಿಡ್ ಲಾಕ್‌ಡೌನ್‌ನಿಂದಾಗಿ ಜನಜೀವನದ ಮೇಲೆ ಉಂಟಾಗಿರುವ ತೊಂದರೆಯನ್ನು ಮನಗಂಡಿರುವ ಸಾರ್ವಜನಿಕರು, ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು, ಕೋವಿಡ್ ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಿದ್ದು, ವಾರಾಂತ್ಯದ ಕರ್ಫ್ಯೂ ರದ್ದುಪಡಿಸುವಂತೆ ಸಾರ್ವಜನಿಕ ವಲಯ ಮತ್ತು ವರ್ತಕರ ಬೇಡಿಕೆಯಾಗಿರುತ್ತದೆ. ಆ ಪ್ರಯುಕ್ತ ಮೇಲಿನ ಅಂಶಗಳನ್ನು ಪರಿಗಣಿಸಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಪ್ಯೂ ರದ್ದುಪಡಿಸಿ ಆದೇಶ ಹೊರಡಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಅವರು ಮನವಿಯಲ್ಲಿ ತಿಳಿಸಿದ್ದಾರೆ.