ಬೆಂಗಳೂರು: ಸ್ನಾನಕ್ಕೆಂದು ಬಾತ್ ರೂಮ್ ಗೆ ಹೋಗಿದ್ದ ಎಂಬಿಬಿಎಸ್ ವಿದ್ಯಾರ್ಥಿನಿ ಅಲ್ಲಿಯೇ ಮೃತಪಟ್ಟ ಅಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಸಂಪದ (23) ದುರಂತ ಸಾವಿಗೀಡಾದವಳು.
ಬೆಂಗಳೂರಿನ ಮಹಾಲಕ್ಷ್ಮೀ ಬಡಾವಣೆಯ ಮನೆಯೊಂದರ ಸ್ನಾನದ ಕೋಣೆಯಲ್ಲಿ ಈ ಅವಘಡ ಸಂಭವಿಸಿದೆ. ಆಗಸ್ಟ್ 4 ರಂದು ಈ ಅನಾಹುತ ಸಂಭವಿಸಿದ್ದರೂ ತಡವಾಗಿ ಬೆಳಕಿಗೆ ಬಂದಿದೆ . ಅಂದು ಸಂಪದ ಸ್ನಾನಕ್ಕೆ ತೆರಳಿದ್ಧಾಗ ದುರಂತ ಸಂಭವಿಸಿದೆ.
ಸ್ನಾನಕ್ಕೆ ತೆರಳಿ ಎರಡು ಗಂಟೆ ಕಳೆದರೂ ಆಕೆ ಬಾತ್ ರೂಮ್ ನಿಂದ ಹೊರಬರದಿದ್ದಾಗ ಮನೆಯವರು ಬಾಗಿಲು ಮುರಿದು ಒಳಗೆ ನೋಡಿದ್ದಾರೆ. ಅಲ್ಲಿ ಸಂಪದ ಕುಸಿದು ಬಿದ್ದು ಪ್ರಜ್ಞೆ ಕಳಕೊಂಡಿದ್ದಳು. ಕೂಡಲೇ ಸಂಪದಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಆಕೆ ಮಾರ್ಗಮಧ್ಯೆಯೇ ಮೃತಪಟ್ಟಿದ್ದಳು.
ಸಾವಿಗೆ ಕಾರಣ:
ಸ್ನಾನದ ಸಂದರ್ಭ ಗೀಸರ್ನಿಂದ ಕಾರ್ಬನ್ ಮೋನಾಕ್ಸೈಡ್ ಸೋರಿಕೆ ಆಗಿದ್ದು, ಅದರಿಂದಾಗಿ ಆಕೆ ಉಸಿರುಗಟ್ಟಿ ಸಾವಿಗೀಡಾಗಿದ್ದಾಳೆ ಎಂಬುದು ವೈದ್ಯಕೀಯ ಪರೀಕ್ಷೆ ವೇಳೆ ತಿಳಿದುಬಂದಿದೆ. ಮಹಾಲಕ್ಷ್ಮೀ ಬಡಾವಣೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.