ಪುತ್ತೂರು: ಪುತ್ತೂರು ಕಡೆಯಿಂದ ಸುಳ್ಯದ ಆಲೆಟ್ಟಿ ಮೂಲಕ ಕೇರಳದ ಪಾಣತ್ತೂರು ಕರಿಕೆ ಕಡೆಗೆ ಹೋಗುತ್ತಿದ್ದ ಮದುವೆ ದಿಬ್ಬಣದ ಖಾಸಗಿ ಬಸ್ ಪಾಣತ್ತೂರು ಬಳಿ ಪಲ್ಟಿಯಾಗಿದ್ದು, ಸಾವಿನ ಸಂಖ್ಯೆ 8ಕ್ಕೆ ಏರಿದೆ ಎಂದು ಇದೀಗ ತಿಳಿದು ಬಂದಿದೆ. ಮೃತರನ್ನು ರಾಜೇಶ್, ರವಿಚಂದ್ರ, ಆದರ್ಶ್, ಶ್ರೇಯಸ್, ಸುಮತಿ, ಶಶಿ, ಜಯಲಕ್ಷ್ಮಿ ಎಂದು ಗುರುತಿಸಲಾಗಿದೆ. ಇವರಲ್ಲಿ ಇಬ್ಬರು ಮಕ್ಕಳು.

ಇಂದು ಪಾಣತ್ತೂರು ಬಳಿಯ ಕೊಡಗು ಜಿಲ್ಲಾ ವ್ಯಾಪ್ತಿಯ ಚೆತ್ತುಕಯ ಎಂಬಲ್ಲಿ ವರನ ಮನೆಯಲ್ಲಿ ಇದ್ದ ಮದುವೆ ಕಾರ್ಯಕ್ರಮಕ್ಕೆ ವಧುವಿನ ಊರಾದ ಈಶ್ವರ ಮಂಗಲದಿಂದ ವಧುವಿನ ದಿಬ್ಬಣ ಹೋಗುತ್ತಿತ್ತು. ವಧು ಮತ್ತು ಇತರರು ಟಿಟಿ ವಾಹನದಲ್ಲಿ ಹೋಗುತ್ತಿದ್ದರು. ಹಿಂದಿನಿಂದ ಖಾಸಗಿ ಬಸ್ ನಲ್ಲಿ 60 ಕ್ಕೂ ಹೆಚ್ಚು ಮಂದಿ ಹೋಗುತ್ತಿದ್ದರು.ಕಲ್ಲಪ್ಪಳ್ಳಿ – ಪಾಣತ್ತೂರು ಮಧ್ಯೆ ಪೆರಿಯಾರಂ ಎಂಬಲ್ಲಿ ಇಳಿಜಾರಿನಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಮನೆಯೊಂದರ ಮೇಲೆ ಉರುಳಿ ಬಿದ್ದು ದುರಂತ ಸಂಭವಿಸಿದೆ.

35 ಮಂದಿಯನ್ನು ಕಾಞಂಗಾಡ್ ಆಸ್ಪತ್ರೆಗೂ 11 ಮಂದಿಯನ್ನು ಮಂಗಳೂರು ಆಸ್ಪತ್ರೆಗೂ ದಾಖಲಿಸಲಾಗಿದ್ದು, ಈ ಪೈಕಿ ಹತ್ತಕ್ಕೂ ಅಧಿಕ ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.ಘಟನೆಗೆ ಕೇರಳ ಮುಖ್ಯಮಂತ್ರಿ ಸಂತಾಪ ಸೂಚಿಸಿದ್ದಾರೆ. ಘಟನೆಯ ತನಿಖೆಗೆ ಕೇರಳ ಸಾರಿಗೆ ಮಂತ್ರಿ ಆದೇಶಿಸಿದ್ದು, ಕಾಸರಗೋಡು ಜಿಲ್ಲಾಧಿಕಾರಿಯವರು ಕಾಞಂಗಾಡ್ ಸಹಾಯಕ ಕಮೀಷನರ್ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
