ವಿಟ್ಲ: ಪಂ.ವ್ಯಾಪ್ತಿಯ ಕೊಡಂಗಾಯಿ ಜಂಕ್ಷನ್ ನಲ್ಲಿ ಉಪಾಧ್ಯಕ್ಷರ ಮನೆಯಿಂದ ಕೇವಲ 70 ಮೀಟರ್ ಅಂತರದಲ್ಲಿ ಗಾಣದಮೂಲೆ ಎಂಬಲ್ಲಿಗೆ ಸಂಪರ್ಕವಾಗುವ ಕವಲು ರಸ್ತೆಯಿದ್ದು ಕೆಲಸಮಯಗಳ ಹಿಂದಷ್ಟೇ ಕಾಂಕ್ರಿಟೀಕರಣವಾಗಿದೆ. ಇದೇ ರಸ್ತೆಯ ಆರಂಭದಲ್ಲೇ ಇತ್ತೀಚೆಗೆ ಹೆದ್ದಾರಿಗೆ ತಾಗಿಕೊಂಡೇ ಅಕ್ರಮ ಕಟ್ಟಡವೊಂದು ರಾಜಾರೋಷವಾಗಿ ತಲೆಯಿತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷೆ, ಕೆಲವೊಂದು ದಿನ ಪತ್ರಿಕೆಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವಿಟ್ಲಪಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡಂಗಾಯಿ ಎಂಬಲ್ಲಿ ಅಕ್ರಮ ಕಟ್ಟಡ ನಿರ್ಮಾಣದ ಬಗ್ಗೆ ವರದಿಯಾಗಿದ್ದು, ಮಾಹಿತಿ ತಿಳಿದ ತಕ್ಷಣವೇ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಸ್ಥಳಕ್ಕೆ ಹೋಗಿ ಪರಿಶೀಲಿಸಿ ಸುಲೈಮಾನ್ ಎಂಬ ವ್ಯಕ್ತಿಗೆ ಕರ್ನಾಟಕ ಗ್ರಾಮ ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 64ರ ಅನ್ವಯ ಲಿಖಿತ ಅನುಮತಿ ಇಲ್ಲದೇ ಅಕ್ರಮ ಕಟ್ಟಡ ನಿರ್ಮಿಸಿರುವ ಬಗ್ಗೆ ತೆರವುಗೊಳಿಸುವಂತೆ ನೋಟಿಸ್ ನೀಡಿರುತ್ತಾರೆ.
ಕಳೆದ 2 ದಿನಗಳ ಹಿಂದೆ ಸರಕಾರಿ ರಜಾದಿವಸ ಹಾಗೂ ರಾತ್ರಿ ವೇಳೆಯಲ್ಲಿ ಮತ್ತೆ ಕಟ್ಟಡ ನಿರ್ಮಾಣಕ್ಕೆ ತೊಡಗಿರುವುದು ಕಂಡು ಬಂದಿರುತ್ತದೆ.ಅಕ್ರಮ ಕಟ್ಟಿರುವ ಕಟ್ಟಡವನ್ನು ತೆರವುಗೊಳಿಸಲು ರಾಜ್ಯ ಹೆದ್ದಾರಿ ಪ್ರಾಧಿಕಾರ ಇಲಾಖೆಗೆ ಪತ್ರ ಬರೆಯುವುದು ಹಾಗೂ ಪಂಚಾಯತ್ ನಿಂದ ನೀಡಿದ ನೋಟೀಸ್ ಅನ್ನು ಧಿಕ್ಕರಿಸಿ ಅಕ್ರಮ ಕಟ್ಟಡವನ್ನು ನಿರ್ಮಿಸಲು ಹೊರಟಿರುವ ಸುಲೈಮಾನ್ ಸಮಾಜದ ಸ್ವಾಸ್ಥತೆಯನ್ನು ಕೆಡಿಸಲು ಹೊರಟಿರುವ ವ್ಯಕ್ತಿಯ ಮೇಲೆ ಪೊಲೀಸ್ ಇಲಾಖೆಗೂ ದೂರು ನೀಡಲು ಸರ್ವಾನುಮತದಿಂದ ನಿರ್ಣಯ ಕೈಗೊಂಡಿರತ್ತೇವೆ. ಅಕ್ರಮ ಕಟ್ಟಡ ನಿರ್ಮಾಣ ಮಾಡಲು ಯಾವುದೇ ಕಾರಣಕ್ಕೂ ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಅವಕಾಶ ನೀಡಿರುವುದಿಲ್ಲ ಮತ್ತು ಕಾನೂನು ರೀತಿಯಲ್ಲಿ ಅಕ್ರಮ ಕಟ್ಟಡವನ್ನು ತೆರವುಗೊಳಿಸಲು ಪಂಚಾಯತ್ ಆಡಳಿತ, ಬದ್ಧವಾಗಿರುತ್ತದೆ ಎಂದು ಹೇಳಿದರು.
ಹೆದ್ದಾರಿ ಬದಿಯಲ್ಲಿ ಅಕ್ರಮ ಕಟ್ಟಡ ತಲೆಯಿತ್ತಿದ್ದರೂ ಕೂಗಳತೆ ದೂರದಲ್ಲಿರುವ ವಿಟ್ಲ ಪಡ್ನೂರು ಪಂ.ಉಪಾಧ್ಯಕ್ಷರು ಜಾಣಕುರುಡು ಪ್ರದರ್ಶಿಸಿದ್ದಾರೆಂಬ ನೇರ ಆರೋಪ ಗಾಣದಮೂಲೆ ನಿವಾಸಿಗಳದ್ದಾಗಿತ್ತು. ಈ ಬಗ್ಗೆ ಪಂ.ಉಪಾಧ್ಯಕ್ಷ ನಾಗೇಶ್ ಶೆಟ್ಟಿ ಮಾತನಾಡುತ್ತಾ, ರಾತ್ರಿ ಹೊತ್ತಲ್ಲಿ ಅಕ್ರಮ ಕಟ್ಟಡ ನಿರ್ಮಿಸಿದ್ದು ಮರುದಿನ ನನ್ನ ಗಮನಕ್ಕೆ ಬಂದಿರುತ್ತದೆ. ತಕ್ಷಣವೇ ಸಂಬಂಧಿಸಿದ ವ್ಯಕ್ತಿಗಳಲ್ಲಿ ಅಕ್ರಮ ಕಟಾಟಡ ತೆರವು ಮಾಡಬೇಕೆಂದು ಹೇಳಿದ್ದೇನೆ. ಅಲ್ಲದೇ ಪಂ.ಪಿಡಿಒಗೆ ಕರೆ ಮಾಡಿ ಕಾನೂನು ರೀತಿಯ ಶಿಸ್ತುಕ್ರಮ ಜರುಗಿಸುವಂತೆ ಒತ್ತಾಯಿಸಿದ್ದೇನೆ.ನಮ್ಮ ಪಂ.ವ್ಯಾಪ್ತಿಯಲ್ಲಿ ಯಾರೇ ಆಗಲಿ ಕಾನೂನು ಉಲ್ಲಂಘಿಸಿ ಅಕ್ರಮ ಎಸಗಿದಲ್ಲಿ ಮುಲಾಜಿಲ್ಲದೇ ಕಾನೂನು ಕ್ರಮ ಜರುಗಿಸಲು ನಾನು ಒತ್ತಾಯಿಸುತ್ತೇನೆ. ಅಕ್ರಮಗಳಿಗೆ ನನ್ನ ಸಂಪೂರ್ಣ ವಿರೋಧವಿದ್ದು ನನ್ನ ಅಧಿಕಾರವಧಿಯಲ್ಲಿ ಯಾವುದೇ ಕೀಳುಮಟ್ಟದ ರಾಜಕೀಯಕ್ಕೆ ಎಡೆಕೊಡುವುದಿಲ್ಲವೆಂದು ಎಂದು ಪ್ರತಿಕ್ರಿಯಿಸಿದ್ದಾರೆ.