ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಬ್ರಹ್ಮನಗರದ ನಿವಾಸಿಗಳಿಗೆ ಹೊಸ ತೆನೆ ವಿತರಣೆಯು ಸೆ.10ರಂದು ಬ್ರಹ್ಮನಗರ ನಡುಮಂದಿಲು ಶ್ರೀ ದುರ್ಗಾ ಮಾರಿಯಮ್ಮ ದೈವಸ್ಥಾನದಲ್ಲಿ ನಡೆಯಿತು. ದೈವಸ್ಥಾನದ ನಡೆಯಲ್ಲಿ ಹೊಸ ತೆನೆಯನ್ನು ಇಟ್ಟು ಬ್ರಹ್ಮನಗರ ನಿವಾಸಿಗಳಿಗೆ ತೆನೆ ವಿತರಿಸಲಾಯಿತು.
ಹೊಸ ತೆನೆ ಮನೆ ತುಂಬಿಸುವ ಮೂಲಕ ಅಕ್ಷಯವಾಗಲಿ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ಬ್ರಹ್ಮನಗರಕ್ಕೆ ಮಹಾಲಿಂಗೇಶ್ವರ ದೇವಸ್ಥಾನದಿಂದ ತೆನೆ ತಂದಿದ್ದೇವೆ. ಇದನ್ನು ನಿಮ್ಮ ಮನೆಯಲ್ಲಿ ತುಂಬಿಸುವ ಮೂಲಕ ಬಾಳು ಅಕ್ಷಯವಾಗಲಿ. ಎಲ್ಲರು ನಿತ್ಯ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬಂದು ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಮುಂದಿನ ದಿನಗಳಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ದೇವಸ್ಥಾನದ ಮೂಲಕ ನೀಡಲಾಗುತ್ತದೆ. ಇದರ ಸದುಪಯೋಗ ಪಡೆಯುಂತೆ ಅವರು ಹೇಳಿದರು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮಚಂದ್ರ ಕಾಮತ್, ರಾಮ್‌ದಾಸ್ ಗೌಡ, ಡಾ. ಸುಧಾ ಎಸ್ ರಾವ್, ಬಿ.ಐತ್ತಪ್ಪ ನಾಯ್ಕ್ ಮತ್ತು ಶ್ರೀ ದುರ್ಗಾ ಮಾರಿಯಮ್ಮ ದೈವಸ್ಥಾನ ಸಮಿತಿ ಅಧ್ಯಕ್ಷ ಅಶೋಕ್ ಉಪಸ್ಥಿತರಿದ್ದರು. ದೈವಸ್ಥಾನದ ಚಾಕ್ರಿಯವರಾದ ಕುಮಾರ್ ಪ್ರಾರ್ಥನೆ ನಡೆಸಿದರು. ಸಮಿತಿ ಸದಸ್ಯ ಸೂರಜ್ ಸೇರಿದಂತೆ ಪರಿಸರದ ನಿವಾಸಿಗಳು ಉಪಸ್ಥಿತರಿದ್ದರು.