ವಿಟ್ಲ: ಅಡ್ಯನಡ್ಕ ವಾರಣಾಸಿ ಫಾರ್ಮ್ಗೆ ಅತಿಥಿಯಾಗಿ ಬಂದ ಮಹಿಳೆಯೊಬ್ಬಳು ಏಕಾಂಗಿಯಾಗಿ ಸಾಹಸ ಕ್ರೀಡೆಗಳನ್ನು ಆಡುವಾಗ ಕೆರೆಗೆ ಬಿದ್ದು ಮಂಗಳೂರು ಮೂಲದ ವೈದ್ಯೆ ಮೃತಪಟ್ಟಿದ್ದಾರೆ.
ಮಹಿಳೆಯನ್ನು ಮಂಗಳೂರು ಮೂಲದ ವೈದ್ಯೆ ವೈಜೀ ಕರೋಲ್ ಫೆರ್ನಾಂಡೀಸ್ (31) ಎಂದು ಗುರುತಿಸಲಾಗಿದೆ.
ಎರಡು ದಿನಗಳ ಹಿಂದೆ ಫಾರ್ಮ್ ಆಗಮಿಸಿದ ಈಕೆ ಕೆರೆಯ ಸಮೀಪಕ್ಕೆ ಹೋಗಿದ್ದಾರೆ. ತುಂಬಾ ಸಮಯವಾದರೂ ಬಾರದ ಸಂದರ್ಭ ಕೆರೆಯಲ್ಲಿ ಹುಡುಕಾಡಿ ನೀರಿನಡಿಗೆ ಹೋಗಿದ್ದ ಈಕೆಯ ದೇಹವನ್ನು ಹೊರ ತೆಗೆದು ವಿಟ್ಲ ಸಮುದಾಯ ಆಸ್ಪತ್ರೆಗೆ ಕರೆತಂದು ನಂತರ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ.
ವಿಟ್ಲ ಪೊಲೀಸ್ ನಿರೀಕ್ಷಕ ನಾಗರಾಜ್ ಎಚ್. ಇ. ಅವರ ತಂಡ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೆರೆಯಲ್ಲಿ ಶೋಧ: ಮಹಿಳೆ ಒಂಟಿಯಾಗಿ ಬಂದು ಬಟ್ಟೆ ಹಾಗೂ ಪಾದರಕ್ಷೆಯನ್ನು ಕಟ್ಟೆಯ ಮೇಲೆ ಇಟ್ಟು ಕೆರೆಯಲ್ಲಿ ನೀರಿನಾಟಕ್ಕೆ ಇಳಿದಿರಬಹುದೆನ್ನಲಾಗಿದೆ. ಈ ಸಂದರ್ಭ ನೀರಿನ ಒಳಗೆ ಮುಳುಗಿದ್ದು, ಸಮಯವಾದರೂ ಮರಳಿ ಬಾರದ ಸಂದರ್ಭ ಕೆರೆಯ ಕಡೆಗೆ ಹೋಗುವುದನ್ನು ಗಮನಿಸಿದ ಈಜು ಕಲಿಯುವ ವಿದ್ಯಾರ್ಥಿಗಳು ಕೆರೆಯ ಬಳಿಗೆ ಬಂದು ಕೆರೆಯಲ್ಲಿ ಹುಡುಕಾಡಿದಾಗ ದೇಹ ಪತ್ತೆಯಾಗಿದೆ.