ಮೈಸೂರು: ಹುಚ್ಚಗಣಿ ಮಹದೇವಮ್ಮ ದೇಗುಲ ತೆರವು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಹಿಂದೂಪರ ಸಂಘಟನೆಗಳು ಹೋರಾಟ ತೀವ್ರಗೊಳಿಸಿವೆ. ಇಂದು ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಹಿಂದೂ ಜಾಗರಣಾ ವೇದಿಕೆ ಪುತ್ತೂರು ಜಿಲ್ಲೆ ಮತ್ತು ಇತರ ಜಿಲ್ಲೆಗಳ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.


ಇದೇ ವೇಳೆ ಮಾತನಾಡಿದ ಹಿಂದೂಪರ ಸಂಘಟನೆಯ ಮುಖಂಡ ಜಗದೀಶ್ ಕಾರಂತ್, ಇದು ಕೇವಲ ಪ್ರತಿಭಟನೆಯಲ್ಲ, ಸರ್ಕಾರದ ಮುಂದೆ ಭಿಕ್ಷೆ ಬೇಡುವ ಪ್ರತಿಭಟನೆಯೂ ಅಲ್ಲ. ಸರ್ಕಾರದಿಂದ ನಂಜನಗೂಡು ತಹಶೀಲ್ದಾರ್‌ವರೆಗೂ ನಿರ್ಲಕ್ಷ್ಯ ತೋರುವವರ ವಿರುದ್ಧ ಒಂದು ಎಚ್ಚರಿಕೆ ಘಂಟೆಯ ನೀನಾದದ ಸಭೆ. ಹಿಂದೂ ಸಂಘಟನೆಗಳನ್ನ ತಾಲಿಬಾನಿಗಳಿಗೆ ಹೋಲಿಸುವುದು ತಪ್ಪು. ನಿಜ, ನಾವು ತಾಳ್ಮೆ ಹೊಂದಿರುವವರು, ಸಾವಿರ ವರ್ಷಗಳ ಕಾಲ ದೌರ್ಜನ್ಯ ದಬ್ಬಾಳಿಕೆಗಳನ್ನ ಸಹಿಸಿಕೊಂಡಿದ್ದೇವೆ. ಆಕ್ರಮಣಗಳಿಗೆ ತಲೆಬಗ್ಗುವುದಿಲ್ಲ ಎಂದರು.
ನಮ್ಮದೇ ಜನರಿಂದ ನಮ್ಮ ನೆಲದ ಜನರ ಮೇಲೆ ನಡೆದ ದೌರ್ಜನ್ಯ ಸಹಿಸುವುದಿಲ್ಲ. ಈ ಪ್ರಕರಣವನ್ನು ಲಾಜಿಕಲ್ ಎಂಡ್‌ಗೆ ತೆಗೆದುಕೊಂಡು ಹೋಗುವವರೆಗೂ ಹೋರಾಟದ ರಣರಂಗದಿಂದ ಹಿಂದೆ ಸರಿಯುವುದಿಲ್ಲ. ಮೂವತ್ತು ವರ್ಷ ಅಧಿಕಾರ ಅನುಭವಿಸಿರುವ ಮೂರ್ಖ ಮುಖ್ಯ ಕಾರ್ಯದರ್ಶಿಗೆ ಸುಪ್ರಿಂಕೋರ್ಟ್ ತೀರ್ಪು ಸರಿಯಾಗಿ ಗೊತ್ತಿಲ್ವಾ..?

ಅವಿವೇಕಿ ಮುಖ್ಯ ಕಾರ್ಯದರ್ಶಿ ಮೊದಲು ನೀವು ಸರಿಯಾಗಿ ತೀರ್ಪನ್ನ ಓದು. ನ್ಯಾಯಬದ್ಧವಾಗಿದ್ರೆ ದೇಗುಲವನ್ನ ಸಕ್ರಮಗೊಳಿಸು ಅಂತ ಸ್ಪಷ್ಟ ಆದೇಶ ಮಾಡಿದೆ. ಜನರ ಭಾವನೆಗಳಿಗೂ ಬೆಲೆ ಕೊಟ್ಟು ಸ್ಥಳಾಂತರ ಮಾಡು ಎಂದಿದೆ. ಎರಡೂ ಆಗದಿದ್ದರೆ ಡೆಮಾಲಿಷ್ ಮಾಡಿ ಎಂದು ಹೇಳಿದೆ. ಎರಡು ಹೊತ್ತು ವಿಧಾನಸೌಧದಲ್ಲಿ ಎಣ್ಣೆ ಹೊಡೆದು ಎಸಿ ರೂಮಲ್ಲಿ ಕುಳಿತು ನಾನು ಬರೆದಿದ್ದೆ ಕಾನೂನು, ಆಡಿದ್ದೇ ಆಟ ಎಂದುಕೊಂಡಿದ್ದಾನೆ. ಭಾರತ ಬ್ರಿಟಿಷರ ಕಾಲಡಿಯಲ್ಲಿಲ್ಲ ಎಂದು ಕಿಡಿಕಾರಿದರು.