ಪುತ್ತೂರು: ಬೆಂಗಳೂರಿನ ಹಿಂದೂ ಮಹಿಳೆ, ಯುವಕ ಮತ್ತು ಅನ್ಯ ಕೋಮಿನ ಯುವಕ ಬೈಪಾಸ್ ರಸ್ತೆಯ ಪ್ರತಿಷ್ಠಿತ ಹೊಟೇಲೊಂದರಲ್ಲಿ ಕಳೆದ ಮೂರು ದಿನಗಳಿಂದ ರೂಮ್ ಮಾಡಿ ತಂಗಿದ್ದ ಮಾಹಿತಿ ಪಡೆದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ ಮತ್ತು ಸ್ಥಳಕ್ಕೆ ತೆರಳಿದ ಪೊಲೀಸರು ಹೊಟೇಲ್ ರೆಸ್ಟೋರೆಂಟ್‌ನಲ್ಲಿದ್ದ ಮೂವರನ್ನು ಠಾಣೆಗೆ ಕರೆದೊಯ್ದ ಘಟನೆ ಸೆ.20ರಂದು ಸಂಜೆ ನಡೆದಿದ್ದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಐವರ ವಿರುದ್ದ ದೂರು ನೀಡಿದ್ದು ,ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಶೋ ರೂಮ್‌ವೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದೂ ಯುವತಿ ಪುತ್ತೂರಿನ ಬೈಪಾಸ್ ರಸ್ತೆಯ ಹೋಟೆಲ್ ರೆಸ್ಟೋರೆಂಟ್‌ನಲ್ಲಿ ಕಳೆದ ಮೂರು ದಿನಗಳಿಂದ ತಂಗಿದ್ದು, ಅದೇ ರೂಮ್‌ನಲ್ಲಿ ಓರ್ವ ಹಿಂದೂ ಯುವಕ ಮತ್ತು ಅನ್ಯ ಕೋಮಿನ ಯುವಕ ಇರುವ ಮಾಹಿತಿ ಪಡೆದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹೋಟೆಲ್‌ಗೆ ತೆರಳಿದಾಗ ಯುವತಿ ಮತ್ತು ಇಬ್ಬರು ಯುವಕರು ಅಲ್ಲಿನ ರೆಸ್ಟೋರೆಂಟ್‌ನಲ್ಲಿ ಉಪಹಾರ ಸೇವಿಸುತ್ತಿದ್ದರು.

ಇದೇ ಸಂದರ್ಭ ಪೊಲೀಸರೂ ಸ್ಥಳಕ್ಕೆ ಆಗಮಿಸಿ ಯುವತಿ ಮತ್ತು ಜೊತೆಗಿದ್ದ ಇಬ್ಬರು ಯುವಕರನ್ನು ಠಾಣೆಗೆ ಕರೆದೊಯ್ದಿದ್ದಾರೆ.ಡಿವೈಎಸ್ಪಿ ಡಾ.ಗಾನ ಪಿ ಕುಮಾರ್ ಅವರು ಮಹಿಳೆ ಸೇರಿದಂತೆ ಮೂವರನ್ನೂ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಪುತ್ತೂರು ನಗರ ಪೊಲೀಸರ ವಶದಲ್ಲಿದ್ದ ತನ್ನ ಮಾಲೀಕತ್ವದ ಕಾರ್ ಅನ್ನು ಬಿಡಿಸಿಕೊಳ್ಳುವುದಕ್ಕಾಗಿ ತನ್ನ ಜೊತೆ ಕೆಲಸ ನಿರ್ವಹಿಸುತ್ತಿದ್ದ ಉಳ್ಳಾಲ ನಿವಾಸಿ ಯು. ಕೆ. ಮಹಮ್ಮದ್ ಅರಾಫತ್ ಮತ್ತು ಬೆಂಗಳೂರು ಕೊಟ್ಟಿಗೇರಿ ನಿವಾಸಿ ಶಿವ ಎಂಬವರ ಜೊತೆ ಬಾಡಿಗೆ ವಾಹನದಲ್ಲಿ ಸೆ.17 ರಂದು ಹೊರಟು ಸೆ.18 ರಂದು ಲಾಡ್ಜ್ ನಲ್ಲಿ ಮೂವರು ತಂಗಿದ್ದು, ಸೆ.20 ರಂದು ಲಾಡ್ಜ್ ನಲ್ಲಿ ಮೂವರು ಊಟ ಮಾಡುತ್ತಿದ್ದ ವೇಳೆ ಲಾಡ್ಜ್ ನ ಹೊರಗಡೆ ಸುಮಾರು 10 ಜನ ನಿಂತುಕೊಂಡಿದ್ದವರ ಪೈಕಿ 4-5 ಮಂದಿ ಬಳಿಗೆ ಬಂದು ನನ್ನ ಜೊತೆಯಲ್ಲಿದ್ದವರ ಹೆಸರು ಕೇಳಿ ಅವಾಚ್ಯ ಶಬ್ಧಗಳಿಂದ ಬೈದು, ಶಿವ ಎಂಬವರಿಗೆ ಹಲ್ಲೆ ಮಾಡಿ ನಮ್ಮ ಫೋಟೊಗಳನ್ನು ತೆಗೆದು ಅವಮಾನ ಪಡಿಸಿರುತ್ತಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಅಕ್ರ: 70/2021 ಕಲಂ 143,147,323,504,509 ಜೊತೆಗೆ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕೆಮ್ಮಾಯಿ ಅಮಲು ಪದಾರ್ಥ ಸೇವಿಸಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದ ಆರೋಪಿಯೊಂದಿಗೆ ಬಂದಿದ್ದ ದೂರುದಾರ ಮಹಿಳೆ:
ಈ ಘಟನೆಯಲ್ಲಿರುವ ಅನ್ಯಕೋಮಿನ ಯುವಕ ಉಳ್ಳಾಲ ಕೋಟೆಪುರದ ಮೊಹಮ್ಮದ್ ಅರಾಫತ್ ಕೆಲ ಸಮಯಗಳ ಹಿಂದೆ ಪುತ್ತೂರಿನ ಪೊಲೀಸ್ ಸಿಬ್ಬಂದಿಗೆ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಬಂಧಿಯಾಗಿದ್ದ.

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಪೆರಾಜೆಯಲ್ಲಿ ಸೈಡ್ ಕೊಡುವ ವಿಚಾರದಲ್ಲಿ ಲಾರಿ ಚಾಲಕನಿಗೆ ಹಲ್ಲೆ ನಡೆಸಿ, ಕಾರಿನಲ್ಲಿ ಪರಾರಿಯಾದ ತಂಡವೊಂದು ಉಪ್ಪಿನಂಗಡಿ ನೆಕ್ಕಿಲಾಡಿ ಚೆಕ್ ಪಾಯಿಂಟ್‌ನಲ್ಲಿ ಪೊಲೀಸರಿಂದ ತಪ್ಪಿಸಿಕೊಂಡು ಪುತ್ತೂರು ರಸ್ತೆಯಲ್ಲಿ ಪ್ರಯಾಣಿಸಿ ಕೆಮ್ಮಾಯಿಯಲ್ಲಿ ಪುತ್ತೂರು ಪೊಲೀಸರ ವಶವಾದ ಘಟನೆ ಜೂ.2 ರಂದು ನಡೆದಿತ್ತು. ನಶೆಯಲ್ಲಿದ್ದ ತಂಡ ಎಸ್.ಐ ಜಂಬೂರಾಜ್ ಮಹಾಜನ್, ಜೀಪು ಚಾಲಕ ಕೀರ್ತನ್‌ರವರೊಂದಿಗೆ ಮಾತಿನ ಚಕಮಕಿ ನಡೆಸಿದ್ದಲ್ಲದೆ ಹಲ್ಲೆ ನಡೆಸಿದ್ದರು. ಈ ಪ್ರಕರಣದ ಕಾರ್ ಅನ್ನು ಪೊಲೀಸರು ವಶ ಪಡಿಸಿಕೊಂಡಿದ್ದು ಅದನ್ನು ಬಿಡಿಸಿಕೊಂಡು ಹೋಗುವುದಕ್ಕಾಗಿ ಈ ಮೂವರು ಬಂದಿದ್ದರು.
