ಗಂಗೊಳ್ಳಿ: ಗೋ ಹತ್ಯೆ ವಿರೋಧಿಸಿ ಮತ್ತು ಗೋ ಹಂತಕರನ್ನು ಗಡಿಪಾರು ಮಾಡಲು ಒತ್ತಾಯಿಸಿ ಗಂಗೊಳ್ಳಿಯಲ್ಲಿ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ್ಯದ ಪ್ರಧಾನ ಕಾರ್ಯದರ್ಶಿ ಕೆ.ಟಿ. ಉಲ್ಲಾಸ್, ಗೋವುಗಳನ್ನು ಅಮಾನುಷವಾಗಿ ಕೊಯ್ದು ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ವ್ಯಕ್ತಿಗಳು ಸಮಾಜದಲ್ಲಿ ಶಾಂತಿ ಕದಡುವ ಅಶಾಂತಿಯ ವಾತಾವರಣ ಉಂಟು ಮಾಡುವ ಷಡ್ಯಂತ್ರ ರೂಪಿಸಿದ್ದಾರೆ. ಹಿಂದೂಗಳ ರಕ್ತ ಕುದಿಯುವಂತೆ ಮಾಡಿದ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇಲಾಖೆ ಸುಮೊಟೊ ಪ್ರಕರಣ ದಾಖಲು ಮಾಡಿ ಗೂಂಡಾ ಕಾಯ್ದೆ ಅಡಿಯಲ್ಲಿ ಗಡಿಪಾರು ಮಾಡಬೇಕಾಗಿತ್ತು ಎಂದು ಹೇಳಿದರು.

ಹಿಂದೂ ಧರ್ಮದಲ್ಲಿ ಗೋವನ್ನು ಧಾರ್ಮಿಕವಾಗಿ ಪೂಜನೀಯ ಭಾವನೆಯಿಂದ ನೋಡಲಾಗುತ್ತಿದೆ. ಹಿಂದೂ ಪರಂಪರೆಯಲ್ಲಿ ಪೂಜ್ಯತೆಯನ್ನು ಪಡೆದುಕೊಂಡ ಶ್ರೇಷ್ಠ ಪ್ರಾಣಿ. ಮಾನವೀಯ ಭಾವನೆ ಗೋವಿಗಿದೆ. ಅದು ಗೋವು ಸಾಕಿದವರಿಗೆ ಗೊತ್ತು ಗೋವಿಗೆ ತಾಯಿಯ ಸ್ಥಾನ ನೀಡಲಾಗುತ್ತಿದೆ. ಗೋವನ್ನು ಕೊಲ್ಲುವುದೆಂದರೆ ತಾಯಿಯನ್ನು ಕೊಂದಂತೆ..ಆದರೆ ಇಂದು ಹಿಂದೂಗಳ ಮನೆಗೆ ತೆರಳಿ ತಲವಾರು ತೋರಿಸಿ ದನಗಳನ್ನು ಕದಿಯುವ ಪ್ರವೃತ್ತಿ ಹೆಚ್ಚುತ್ತಿದೆ. ಇಂಥಹ ಸಮಾಜಘಾತುಕ ಶಕ್ತಿಗಳ ಮೇಲೆ ಕ್ರಮ ಜರುಗಿಸುವ ಕೆಲಸ ಆಗದಿರುವುದರಿಂದಲೇ ಇಂತಹ ಅಮಾನುಷ ಕೃತ್ಯಗಳು ಹೆಚ್ಚಲು ಕಾರಣವಾಗಿದೆ ಎಂದರು.

ಹಿಂದೂ ಸಮಾಜ ಇವತ್ತು ಬಲಿಷ್ಠವಾಗಿದೆ. ಇಂತಹ ಕಿಡಿಗೇಡಿ ಕೃತ್ಯಗಳ ವಿರುದ್ದ ಒಟ್ಟಾಗಿ ಹೋರಾಡಲು ಸಜ್ಜಾಗಿದೆ. ಹಿಂದೂ ಸಮಾಜಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಅನಿವಾರ್ಯವಾಗಿದೆ. ಇಲಾಖೆಗಳು ಈ ವಿಚಾರವನ್ನು ಗಂಭೀರವಾಗಿ ತಗೆದುಕೊಳ್ಳಬೇಕು. ಈ ಪ್ರಕರಣವನ್ನು ಇಲ್ಲಿಗೆ ಬಿಡದೇ ಸಂಬಂಧಪಟ್ಟವರನ್ನು ಗಡಿಪಾರು ಮಾಡುವ ಮೂಲಕ ಇಂಥಹ ವಿಡಿಯೋಗಳನ್ನು ವೈರಲ್ ಮಾಡಿ ಸಮಾಜದಲ್ಲಿ ಅಶಾಂತಿ ಕಲ್ಪಿಸುವ ಕೆಟ್ಟ ಶಕ್ತಿಗಳಿಗೆ ಕಡಿವಾಣ ಹಾಕಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಮಂಗಳೂರು ವಿಭಾಗದ ಪ್ರ. ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ, ಹಿಂ. ಜಾ. ವೇ. ಉಡುಪಿ ಜಿಲ್ಲಾಧ್ಯಕ್ಷ ಪ್ರಶಾಂತ್ ನಾಯಕ್, ಗಂಗೊಳ್ಳಿ ಹಿಂ. ಜಾ. ವೇ. ಅಧ್ಯಕ್ಷ ಗೋವಿಂದ ಶೇರುಗಾರ್, ಮುಖಂಡರಾದ ವಾಸುದೇವ ಗಂಗೊಳ್ಳಿ, ನವೀನ್ ಗಂಗೊಳ್ಳಿ, ಯಶವಂತ್ ಗಂಗೊಳ್ಳಿ, ಮಹೇಶ್ ಬೈಂದೂರು ಉಪಸ್ಥಿತರಿದ್ದರು. ಗೋ ಹಂತಕರ ಬಂಧನ ಮತ್ತು ಗಡಿಪಾರಿಗೆ ಒತ್ತಾಯಿಸಿ ತಹಶಿಲ್ದಾರ್ ಕಿರಣ್ ಗೌರಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಮಹಿಳೆಯರು ಪಾಲ್ಗೊಳ್ಳುವಿಕೆ ಹೆಚ್ಚು ಕಂಡುಬಂದಿದ್ದು, ಗಂಗೊಳ್ಳಿ ಪೇಟೆ ಸ್ವಯಂಪ್ರೇರಿತವಾಗಿ ಬಂದ್ ಮಾಡಲಾಗಿತ್ತು. ಮೆರವಣಿಗೆಯಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.
