ಕಡಬ: ನಾಯಿಯ ವೈರಸ್‌ಗೆ ತುತ್ತಾಗಿ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಕಡಬದ ಆಲಂಕಾರಿನಲ್ಲಿ ಸಂಭವಿಸಿದೆ. ಮೃತಳನ್ನು ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ, ಆಲಂಕಾರು ಗ್ರಾಮದ ಕೆದಿಲ ನಿವಾಸಿ ವರ್ಗಿಸ್ ಎಂಬವರ ಪುತ್ರಿ ವಿನ್ಸಿ ಸಾರಮ್ಮ (17) ಎಂದು ಗುರುತಿಸಲಾಗಿದೆ.

ಗುರುವಾರ ಬೆಳಿಗ್ಗೆ ಇದ್ದಕ್ಕಿದ್ದಂತೆ ತಲೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದ್ದು, ಸಂಜೆ ವೇಳೆ ತಲೆನೋವು ಉಲ್ಬಣಗೊಂಡಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಖಾಸಗಿ ಆಸ್ಪತ್ರೆಗೆ ಸೇರಿಸಿ ಬಳಿಕ ಮಂಗಳೂರು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ಆದರೇ ಚಿಕಿತ್ಸೆ ಫಲಕಾರಿಯಾಗದೆ ತಡ ರಾತ್ರಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಸುಮಾರು 4 ತಿಂಗಳ ಹಿಂದೆ ಆಲಂಕಾರು ಪೇಟೆ ಸೇರಿದಂತೆ, ಮೃತಳ ಮನೆಯ ಸುತ್ತಮುತ್ತ ಹುಚ್ಚು ನಾಯಿ ದಾಳಿ ಮಾಡಿದ್ದು, ಈ ವೇಳೆ ಅಲಂಕಾರು ಪೇಟೆಯಲ್ಲಿರುವ ಬೀದಿ ನಾಯಿ ಸೇರಿದಂತೆ ಇಬ್ಬರ ಮೇಲೆ ದಾಳಿ ನಡೆಸಿತ್ತು. ಮೃತಳ ಮನೆಯ ನಾಯಿಯು ಕೆಲವು ತಿಂಗಳುಗಳ ಹಿಂದೆ ರೇಬೀಸ್‌ಗೆ ಒಳಗಾಗಿ ಸಾವನ್ನಪ್ಪಿತ್ತು. ಅದೇ ನಾಯಿಯ ವೈರಸ್ ವಿದ್ಯಾರ್ಥಿನಿಗೂ ತಗಲಿರಬಹುದೆಂದು ಶಂಕಿಸಲಾಗಿದೆ.
2018ರ ಏಪ್ರಿಲ್ ತಿಂಗಳಲ್ಲಿ ಮೃತಳ ಅಣ್ಣನೂ ಆಕಸ್ಮಿಕವಾಗಿ ನದಿ ನೀರಿಗೆ ಬಿದ್ದು ಸಾವನ್ನಪ್ಪಿದ್ದ. ಬಳಿಕ ಇದ್ದ ಏಕೈಕ ಪುತ್ರಿಯನ್ನು ಅತೀ ಕಾಳಜಿಯಿಂದ ಸಲಹಿದರು. ಆದರೆ, ವಿಧಿಯ ಕ್ರೂರತನಕ್ಕೆ ಇದ್ದ ಒಂದು ಕರುಳಕುಡಿಯನ್ನು ಕಳಕೊಂಡ ಪೋಷಕರ ರೋದನ ಮುಗಿಲಿ ಮುಟ್ಟಿದೆ.