ಕಾಸರಗೋಡು: ಎರಡು ತಂಡಗಳ ನಡುವೆ ಘರ್ಷಣೆ ಉಂಟಾಗಿ ಇತ್ತಂಡಗಳ ಆರು ಮಂದಿ ಚೂರಿ ಇರಿತಕ್ಕೆ ಒಳಗಾಗಿ ಗಾಯಗೊಂಡ ಘಟನೆ ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಬಂಬ್ರಾಣದಲ್ಲಿ ಅ.3 ರ ರಾತ್ರಿ ನಡೆದ ಬಗ್ಗೆ ವರದಿಯಾಗಿದೆ.
ಬಂಬ್ರಾಣ ಸಮೀಪದ ಅಂಡಿತ್ತಡ್ಕ ಎಂಬಲ್ಲಿ ಗಲಾಟೆ ನಡೆದಿದ್ದು. ಕೋಳಿ ಅಂಕದಲ್ಲಿ ಉಂಟಾದ ವಾಗ್ವಾದ ಬಳಿಕ ರಾತ್ರಿ ವೇಳೆ ತಾರಕಕ್ಕೇರಿ ತಂಡಗಳ ಹೊಡೆದಾಟಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಬಂಬ್ರಾಣದ ಕಿರಣ್ (29), ಕುದ್ರೆಪ್ಪಾಡಿಯ ಗುರುರಾಜ್(23), ನವೀನ್(22), ಧೀರಜ್ (21), ಪ್ರವೀಣ್ (21) ಮತ್ತು ಚರಣ್ (23) ಚೂರಿ ಇರಿತಕ್ಕೊಳಗಾದವರು. ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ನಿನ್ನೆ ಮದ್ಯಾಹ್ನ ಸ್ಥಳೀಯವಾಗಿ ಧರ್ಮತ್ತಡ್ಕ ಎಂಬಲ್ಲಿ ಅನಧಿಕೃತ ಕೋಳಿ ಅಂಕ ನಡೆದಿತ್ತು ಎಂದು ಹೇಳಲಾಗುತ್ತಿದೆ. ಈ ವೇಳೆ ಎರಡು ತಂಡಗಳ ನಡುವೆ ಕ್ಷುಲ್ಲಕ ವಿಷಯಕ್ಕೆ ವಾಗ್ವಾದ ಉಂಟಾಗಿದೆ. ಮೂಲವೊಂದರ ಪ್ರಕಾರ ಈ ವಿವಾದವನ್ನು ಪರಿಹರಿಸಲು ಆ ಎರಡು ತಂಡಗಳು ರಾತ್ರಿ ಮತ್ತೆ ಬಂಬ್ರಾಣ ಎಂಬಲ್ಲಿ ಸೇರಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಜಗಳ ತಾರಕಕ್ಕೇರಿ ಚೂರಿ ಇರಿತ ನಡೆದಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕುಂಬಳೆ ಪೊಲೀಸರು ತನಿಖೆ ನಡೆಸುತ್ತಿದ್ದು ಸತ್ಯಾಂಶ ಅದರಿಂದ ಹೊರ ಬರಬೇಕಿದೆ.