ಗಾನ ಗಂಧರ್ವ, ಪದ್ಯಾಣ ಶೈಲಿಯ ಸೃಷ್ಟಿಕರ್ತ, ತೆಂಕುತಿಟ್ಟಿನ ಶ್ರೇಷ್ಠ ಭಾಗವತ ಪದ್ಯಾಣ ಗಣಪತಿ ಭಟ್ (66) ವಯೋ ಸಹಜ ಖಾಯಿಲೆಯಿಂದ ಇಂದು ಬೆಳಿಗ್ಗೆ ಇಹಲೋಕ ತ್ಯಜಿಸಿದರು. ಪದ್ಯಾಣರು ಪತ್ನಿ ಶೀಲಾಶಂಕರಿ, ಮಕ್ಕಳಾದ ಸ್ವಸ್ತಿಕ್, ಕಾರ್ತಿಕ್ ,ನೂರಾರು ಶಿಷ್ಯಂದಿರು ಹಾಗೂ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.
ಇವರು ಮಾಂಬಾಡಿ ನಾರಾಯಣ ಭಾಗವತರ ಶಿಷ್ಯರು. ಗಾನಗಂಧರ್ವ ಖ್ಯಾತಿಯ ಗಣಪತಿ ಭಟ್ ರವರು ಸುರತ್ಕಲ್ ಮೇಳದಲ್ಲಿ ಅನೇಕ ವರ್ಷಗಳ ವ್ಯವಸಾಯವನ್ನು ಮಾಡಿದವರು. ಪದ್ಯಾಣ ಗಣಪತಿ ಭಟ್ಟರು 1955 ಜನವರಿ 21ರಂದು ಸುಳ್ಯ ತಾಲೂಕಿನ ಕಲ್ಮಡ್ಕದ ಸಮೀಪ ಗೋಳ್ತಜೆ ಎಂಬಲ್ಲಿ ಪದ್ಯಾಣ ತಿರುಮಲೇಶ್ವರ ಭಟ್, ಸಾವಿತ್ರಿ ಅಮ್ಮ ದಂಪತಿಗಳಿಗೆ ಮಗನಾಗಿ ಜನಿಸಿದರು.
ಯಕ್ಷಗಾನವು ಪದ್ಯಾಣ ಮನೆಯವರಿಗೆ ರಕ್ತಗತವೇ ಆಗಿರುವ ವಿಚಾರ. ಗಣಪತಿ ಭಟ್ಟರ ಅಜ್ಜ ಪುಟ್ಟು ನಾರಾಯಣ ಭಟ್ಟರು ಶ್ರೇಷ್ಠ ಭಾಗವತರಾಗಿದ್ದರು. ಹಿಮ್ಮೇಳದ ಮಹಾನ್ ಗುರು ಮಾಂಬಾಡಿ ನಾರಾಯಣ ಭಾಗವತರಿಗೂ ಗುರುಸದೃಶರಾಗಿದ್ದವರು. ಪದ್ಯಾಣ ಗಣಪತಿ ಭಟ್ಟರು ತೆಂಕುತಿಟ್ಟಿನ ಶ್ರೇಷ್ಠ ಭಾಗವತರಲ್ಲೊಬ್ಬರು.
ಪ್ರಸ್ತುತ ಶ್ರೀ ಹನುಮಗಿರಿ ಮೇಳದ ಪ್ರಧಾನ ಭಾಗವತರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈಟಿವಿಯ “ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ ಮೊದಲ ಯಕ್ಷಗಾನ ಭಾಗವತ ಎಂಬ ಹೆಗ್ಗಳಿಕೆ ಇವರದು. ಇವರ ಗಾಯನವನ್ನು ನೋಡಿ ಕಾರ್ಯಕ್ರಮದ ನಿರ್ವಾಹಕ ಡಾ| ಎಸ್.ಪಿ. ಬಾಲಸುಬ್ರಹ್ಮಣ್ಯ ಅವರು ಪ್ರಶಂಸಿದ್ದರು. ಅಷ್ಟು ಸುಲಭವಾಗಿ ಯಾರನ್ನೂ ಮೆಚ್ಚದ ಯಕ್ಷಗಾನ ಲೋಕದ ದಂತ ಕಥೆ ಶೇಣಿ ಡಾ| ಗೋಪಾಲ ಕೃಷ್ಣ ಭಟ್ ಸೈ ಅನ್ನಿಸಿಕೊಂಡ ಭಾಗವತ ಪದ್ಯಾಣ. ಹಿರಿಯ ಭಾಗವತ ದಾಮೋದರ ಮಂಡೆಚ್ಚರ ನಿಧನದ ಬಳಿಕ ತಮ್ಮ ಬಹುತೇಕ ಕೂಟ , ತಾಳಮದ್ದಲೆ ಕಾರ್ಯಕ್ರಮಗಳಿಗೆ ಪದ್ಯಾಣ ಗಣಪತಿ ಅವರನ್ನೇ ಶೇಣಿಯವರು ಭಾಗವತರನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದರು ಅಥಾವ ಕೂಟದ ಆಯೋಜಕರಿಗೆ ಶಿಫಾರಸ್ಸು ಮಾಡುತ್ತಿದ್ದರು.
ಯಕ್ಷಗಾನದಲ್ಲಿ ಅಷ್ಟೇನೂ ಬಳಕೆಯಲ್ಲಿಲ್ಲದ ಕೆಲವು ರಾಗಗಳನ್ನು ಬಳಸಿದ ಕೀರ್ತಿ ಪದ್ಯಾಣರದ್ದು. ಸಿಂಹೇಂದ್ರ ಮಧ್ಯಮ, ವೃಂದಾವನ ಸಾರಂಗ್, ಯಮನ್ ಕಲ್ಯಾಣಿ, ರೇವತಿ ಮೊದಲಾದ ರಾಗ ಪ್ರಕಾರಗಳನ್ನು ಅವರು ಭಾಗವತಿಕೆಯಲ್ಲಿ ದುಡಿಸಿಕೊಂಡವರು. ವಾಸಂತಿ ರಾಗವನ್ನು ಯಕ್ಷಗಾನದಲ್ಲಿ ಪ್ರಪ್ರಥಮ ವಾಗಿ ಅಳವಡಿಸಿದ ಕೀರ್ತಿ ಪದ್ಯಾಣರದ್ದು ಎಂದು ಹಿರಿಯ ಅಂಕಣಕಾರ ಶಾಂತರಾಮ ಕುಡ್ವರವರು ತಮ್ಮ ಅಂಕಣವೊಂದರಲ್ಲಿ ಬರೆದುಕೊಂಡಿದ್ದಾರೆ. ಹೀಗೆ ಯಕ್ಷಗಾನ ಲೋಕದಲ್ಲಿ ತಮ್ಮದೇ ಆದ ಪದ್ಯಾಣ ಶೈಲಿಯನ್ನು ಸೃಷ್ಟಿಸಿದ್ದರು.
ಗಣಪತಿ ಭಟ್ ಅವರಿಗೆ ಕಲಿಕೆಯಲ್ಲಿ ಅಷ್ಟು ಆಸಕ್ತಿಯಿರಲಿಲ್ಲ. ಹಿರಿಯರ ಒತ್ತಡಕ್ಕೆ ಮಣಿದು ಶಾಲೆಗೆ ಹೋಗುತ್ತಿದ್ದರು. ಹೀಗಾಗಿ ಆತ ಯಕ್ಷಗಾನವನ್ನಾದರೂ ಕಲಿಯಲಿ ಎಂದು ಅವರಮ್ಮ ಹೇಳಿದರಂತೆ. ಹೀಗಾಗಿ ಅವರು ಶ್ರೀ ಧರ್ಮಸ್ಥಳ ಯಕ್ಷಗಾನ ಲಲಿತ ಕಲಾ ತರಬೇತಿ ಕೇಂದ್ರ ಸೇರಿ ಅಲ್ಲಿ ಯಕ್ಷಗಾನದ ಪಟ್ಟುಗಳನ್ನು ಕಲಿತರು. ಅಲ್ಲಿ ಮಾಂಬಾಡಿ ನಾರಾಯಣ ಭಟ್ಟರ ಶಿಷ್ಯನಾಗಿ ಕಲಿಕೆಯಲ್ಲಿ ತೊಡಗಿಸಿಕೊಂಡರು. ಪದ್ಯಾಣ ಗಣಪತಿ ಭಟ್ಟರು ಶೇಣಿ ಗೋಪಾಲಕೃಷ್ಣ ಭಟ್ಟರು ನನ್ನ ಎರಡನೇಯ ಗುರು ಹಾಗೂ ಅಗರಿ ರಘುರಾಮ ಭಾಗವತರು ನನ್ನ ಮೂರನೆಯ ಗುರುಗಳು ಎಂದು ಹೇಳಿಕೊಂಡಿದ್ದರು.
ಗಣಪತಿ ಭಟ್ಟರು ತಮ್ಮ 16ರ ಹರೆಯದಲ್ಲೇ (1971ರಲ್ಲಿ) ಚೌಡೇಶ್ವರೀ ಮೇಳದಲ್ಲಿ ಸಂಗೀತಗಾರರಾಗಿ ತಮ್ಮ ಯಕ್ಷಲೋಕದ ಬದುಕು ಅರಂಭಿಸಿದರು . ಬಳಿಕ ಭಾಗವತರಾಗಿ ಕುಂಡಾವು, ಚೌಡೇಶ್ವರೀ, ಸುರತ್ಕಲ್, ಮಂಗಳಾದೇವಿ, ಕರ್ನಾಟಕ, ಎಡನೀರು, ಹೊಸನಗರ ಮೇಳದಲ್ಲಿ ದುಡಿದಿದ್ದಾರೆ. ಆ ಬಳಿಕ 5 ದಶಕಗಳ ಕಾಲ ಯಕ್ಷರಂಗವನ್ನು ತಮ್ಮ ಕರ್ಣಾನಂದಕರ ಗಾಯನದಿಂದ ಆಳಿದರು. ಅವರ ಇಂಪಾದ ಗಾಯನಕ್ಕೆ ಯಕ್ಷಪ್ರಿಯರು ಮನಸೋತರು. ಯಕ್ಷಗಾನದ ಸ್ಟಾರ್ ಭಾಗವತರೆನ್ನಿಸಿಕೊಂಡರು. ಜಿಲ್ಲೆಯ ವಿವಿಧ ಯಕ್ಷಗಾನ ಮೇಳಗಳಲ್ಲಿ ಕಾರ್ಯ ನಿರ್ವಹಿಸಿ ಯಕ್ಷಲೋಕವನ್ನು ಶ್ರೀಮಂತಗೊಳಿಸಿದರು.
ದ. ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪದ್ಯಾಣರು ಒಲಿದಿತ್ತು. ದುಬೈ, ಮಸ್ಕತ್, ಕುವೈಟ್ ಹೀಗೆ ವಿದೇಶಗಳಲ್ಲಿ ಪ್ರದರ್ಶನ ನೀಡಿ ಸನ್ಮಾನಗಳನ್ನು ಪಡೆದಿದ್ದಾರೆ. ಮುಂಬೈ, ದಿಲ್ಲಿ, ಕಾಸರಗೋಡು, ಶಿವಮೊಗ್ಗ, ಮಂಗಳೂರು ಸೇರಿದಂತೆ ದೇಶಾದ್ಯಂತ ಹಲವೆಡೆ ಅಭಿಮಾನಿಗಳ ಗೌರವ ಸಮ್ಮಾನಗಳನ್ನು ಅವರು ಸ್ವೀಕರಿಸಿದ್ದಾರೆ.