ಪುತ್ತೂರು: ಕ್ಷೇಮನಿಧಿ, ಸಹಾಯ ಹಸ್ತ, ಬಡವರಿಗೆ ಮನೆ ನಿರ್ಮಾಣ, ವಿದ್ಯಾರ್ಥಿಗಳಿಗೆ ನೆರವು ಮೊದಲಾದ ಕೆಲಸಗಳಿಂದ ಪುತ್ತೂರು ಬಂಟರ ಸಂಘ ಸಮಾಜದ ನಕ್ಷತ್ರವಾಗಿದೆ ಎಂದು ವರ್ಲ್ಡ್ ಬಂಟ್ಸ್ ಫೆಡರೇಷನ್ ಕಾರ್ಯದರ್ಶಿ ಸುಧೀರ್ ಶೆಟ್ಟಿ ಎಣ್ಮಕಜೆ ಹೇಳಿದರು. ಪುತ್ತೂರು ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ತಾಲೂಕು ಸಮಿತಿ ಮಾರ್ಗದರ್ಶನದಲ್ಲಿ ಪುತ್ತೂರು ಮಹಿಳಾ, ಯುವ, ವಿದ್ಯಾರ್ಥಿ ಬಂಟರ ಸಂಘದ ಸಹಕಾರದಲ್ಲಿ ಪುತ್ತೂರು ಬಂಟರ ಭವನದಲ್ಲಿ ಅ.10 ರಂದು ನಡೆದ ಬಂಟರ ಸ್ನೇಹ ಸಮ್ಮಿಲನದಲ್ಲಿ ಅವರು ಮಾತನಾಡಿದರು.
ಪುತ್ತೂರು ಬಂಟರ ಸಮಾಜ ಉತ್ತಮ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದೆ. ಸಮಾಜದ ಮುಖ್ಯವಾಹಿನಿಗೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಬಂಟರ ಸಂಘ, ಇತರ ಸಮಾಜಗಳಿಗೂ ಮಾದರಿ ಎಂದ ಅವರು, ಸರಿಯಾದ ಲೆಕ್ಕಪತ್ರ, ಆಡಳಿತ ನಿರ್ವಹಣೆಯೇ ಸಂಸ್ಥೆಯ ಪ್ರಗತಿಯ ಸಂಕೇತ. ಬಂಟರ ಸಂಘ ಅತ್ಯುತ್ತಮ ಸಂಸ್ಥೆಯಾಗಿ ಬೆಳೆದು ನಿಂತಿದೆ. ಸುಭದ್ರವಾದ ಆಡಳಿತ ಮಂಡಳಿ ಇದ್ದ ಕಾರಣ ಸಂಘ ಇನ್ನಷ್ಟು ಉನ್ನತಿಗೆ ಏರಲು ಕಾರಣವಾಗಿದೆ ಎಂದರು.
ಉತ್ತಮ ಕಾರ್ಯ ನಡೆಯಲಿ:
ಬಂಟರ ಸಂಘದ ಮಾಜಿ ಅಧ್ಯಕ್ಷ ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ ಮಾತನಾಡಿ, ಸಮಾಜದ ಏಳಿಗೆಗಾಗಿ ಕ್ಷೇಮ ನಿಧಿಯನ್ನು ಸ್ಥಾಪನೆ ಮಾಡಲಾಯಿತು. ಇಂತಹ ಉತ್ತಮ ಕಾರ್ಯಗಳನ್ನು ಇನ್ನಷ್ಟು ಹಮ್ಮಿಕೊಳ್ಳುವ ಅಗತ್ಯವಿದೆ. ಸಮಾಜ ಇದರ ಸದುಪಯೋಗ ಪಡೆದುಕೊಳ್ಳುವಂತೆ ಆಗಲಿ ಎಂದು ಹೇಳಿ ಹಾರೈಸಿದರು.
ಪುತ್ತೂರಿಗೇ ಕೀರ್ತಿ ಬರುವಂತಾಗಲಿ:
ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕ ಸವಣೂರು ಸೀತಾರಾಮ ರೈ ಮಾತನಾಡಿ, ಪುತ್ತೂರು ಬಂಟರ ಸಂಘದ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ಅವರ ನೇತೃತ್ವದಲ್ಲಿ ಉತ್ತಮ ಕೆಲಸ ಆಗಿದೆ. ಇನ್ನಷ್ಟು ಉತ್ತಮ ಕೆಲಸ ಆಗಬೇಕು. ಇದರಿಂದ ಪುತ್ತೂರಿಗೇ ಕೀರ್ತಿ ಬರುವಂತಾಗಲಿ ಎಂದು ಹಾರೈಸಿದರು.
ಸಂಘದ ಏಳಿಗೆಗಾಗಿ ಶ್ರಮಿಸಿ:
ಸನ್ಮಾನ ಸ್ವೀಕರಿಸಿ ಮಾತನಾಡಿದ ಕರ್ನಲ್ ಜಗಜೀವನ್ ಭಂಡಾರಿ, ರಾಷ್ಟ್ರಕ್ಕಾಗಿ ಸೇವೆ ಮಾಡುವ ಅವಕಾಶ ನನಗೆ ದೊರಕಿತು. ಈ ಕಾರ್ಯವನ್ನು ಪುತ್ತೂರು ಬಂಟರ ಸಂಘ ಗುರುತಿಸಿದೆ. ಬಂಟರ ಸಂಘದ ಏಳಿಗೆಗಾಗಿ ಎಲ್ಲರೂ ಶ್ರಮಿಸಬೇಕು ಎಂದರು.
ಬಂಟರ ಬೆಸುಗೆ ಬಿಡುಗಡೆ:
6 ತಿಂಗಳಿಗೊಮ್ಮೆ ಪ್ರಕಟವಾಗುವ ಬಂಟರ ಸಂಘದ ಮುಖವಾಣಿ ‘ಬಂಟರ ಬೆಸುಗೆ’ಯನ್ನು ಸುಧೀರ್ ಶೆಟ್ಟಿ ಎಣ್ಮಕಜೆ ಬಿಡುಗಡೆಗೊಳಿಸಿದರು.
ಸಮಾಜಮುಖಿ ಸಂಸ್ಥೆ:
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾಹಿತಿ, ಪ್ರಾಧ್ಯಾಪಕ ಡಾ.ನರೇಂದ್ರ ರೈ ದೇರ್ಲ, ಬಂಟರ ಸಂಘ ಸಮಾಜಮುಖಿಯಾದ ಸಂಸ್ಥೆ. ಇಲ್ಲಿ ಪದಾಧಿಕಾರಿಗಳ ಶ್ರಮದ ಬೆವರಿನ ಹನಿ ಇದೆ. ನಮ್ಮ ಮಣ್ಣಿನ ಸತ್ವವನ್ನು ಬಂಟರ ಸಂಘ ಸಾಕಾರಗೊಳಿಸಿದೆ. ಪ್ರತಿಭಾವಂತರನ್ನು ಗುರುತಿಸುವ ಮೂಲಕ ಯುವ ಪ್ರತಿಭೆಗಳಿಗೆ ವೇದಿಕೆಯಾಗಿದೆ ಎಂದರು.
ಪ್ರತ್ಯೇಕ ಜಾಗ ಅವಶ್ಯ:
ರಾಷ್ಟ್ರೀಯ ಕೃಷಿ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ ಕಡಮಜಲು ಸುಭಾಷ್ ರೈ ಮಾತನಾಡಿ, ಬಂಟರ ಸಂಘಕ್ಕೆ ಪ್ರತ್ಯೇಕವಾದ ಜಾಗ ಖರೀದಿಸುವ ಅಗತ್ಯವಿದೆ. ಮುಂದಿನ ಪೀಳಿಗೆಗೆ ಉಪಯುಕ್ತ ಆಗುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳಲು ಸಾಧ್ಯ ಎಂದು ಸಲಹೆ ನೀಡಿದರು.
ಸನ್ಮಾನ, ಗೌರವ, ಅಭಿನಂದನೆ:
ದೇಶಸೇವೆಗಾಗಿ ಕರ್ನಲ್ ಜಗಜೀವನ್ ಭಂಡಾರಿ, ನೆಲಮುಖಿ ಕೃತಿಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ನರೇಂದ್ರ ರೈ ದೇರ್ಲ, ಸಂಘಟನೆ ಹಾಗೂ ಧಾರ್ಮಿಕ ಸಮಾಜ ಸೇವಾ ಕ್ಷೇತ್ರದ ಸಾಧಕಿ ನಯನಾ ರೈ ನೆಲ್ಲಿಕಟ್ಟೆ, ೨೦೨೦ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಸಂಪ್ಯ ಪೊಲೀಸ್ ಠಾಣೆಯ ಪ್ರವೀಣ್ ರೈ ನಡುಕೂಟೇಲು ಪಾಲ್ತಾಡಿ, ಯಶಸ್ವಿ ಮಹಿಳಾ ಉದ್ಯಮಿ ಮಾಧವಿ ಮನೋಹರ್ ರೈ, ಎಂ.ಟೆಕ್‌ನಲ್ಲಿ ೫ನೇ ರ‍್ಯಾಂಕ್ ಪಡೆದ ಆದಿತ್ಯ ರೈ ಡಿ., ಸಿ.ಎ. ವ್ಯಾಸಂಗದಲ್ಲಿ ಅತ್ಯುನ್ನತ ಸಾಧನೆ ಮಾಡಿದ ನಿಹಾಲ್ ರೈ ಬಿಳಿಯೂರು, ರಾಷ್ಟ್ರಮಟ್ಟದ ಕ್ರೀಡಾಪಟುಗಳಾದ ಪ್ರೀತಮ್ ರೈ ಬೊಳಿಕ್ಕಳ, ರಜತ್ ರೈ ಇರ್ದೆ ಬೆಟ್ಟಂಪಾಡಿ ಅವರನ್ನು ಸನ್ಮಾನಿಸಲಾಯಿತು.
ದೇಶ ಸೇವಾ ಅಗರಿ ಪ್ರಶಸ್ತಿ ಪ್ರಾಯೋಜಕರಾದ ಅಗರಿ ಭಂಡಾರಿ ಸಹೋದರರು ಹಾಗೂ ಕರ್ನಲ್ ಜಗಜೀವನ್ ಭಂಡಾರಿ, ಸಾಧಕ ಸಹಕಾರಿ ರಶ್ಮಿ ಪ್ರಶಸ್ತಿ ಪ್ರಾಯೋಜಕರಾದ ಕೆ. ಸೀತಾರಾಮ ರೈ ಸವಣೂರು, ಬೂಡಿಯಾರು ವೈದ್ಯಕೀಯ ಪ್ರತಿಷ್ಠಿತ ಪ್ರಶಸ್ತಿ ಪ್ರಾಯೋಜಕರಾದ ಡಾ. ಬೂಡಿಯಾರು ಸಂಜೀವ ರೈ, ಪ್ರತಿಭಾನ್ವಿತ ವಿದ್ಯಾ ಅರಿಯಡ್ಕ ಪ್ರಶಸ್ತಿ ಪ್ರಾಯೋಜಕರಾದ ಅರಿಯಡ್ಕ ಚಿಕ್ಕಪ್ಪ ನಾಯಕ್, ಪ್ರತಿಭಾನ್ವಿತ ವಿದ್ಯಾ ಚನಿಲ ಪ್ರಶಸ್ತಿ ಪ್ರಾಯೋಜಕರಾದ ಚನಿಲ ತಿಮ್ಮಪ್ಪ ಶೆಟ್ಟಿ, ಪಂಚಮಿ ಉದ್ಯಮ ಸಿರಿ ಪ್ರಶಸ್ತಿ ಪ್ರಾಯೋಜಕರಾದ ಮಿತ್ರಂಪಾಡಿ ಪುರಂದರ ರೈ, ಉತ್ತಮ ಶಿಕ್ಷಕ ಅಶ್ವಿನಿ ಪ್ರಶಸ್ತಿ ಪ್ರಾಯೋಜಕರಾದ ದೇರ್ಲ ಕರುಣಾಕರ ರೈ ಅವರನ್ನು ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಭಾರತೀಯ ರಿಸರ್ವ್ ಬ್ಯಾಂಕ್‌ನ ಉತ್ತರ ವಲಯದ ಮಾಜಿ ನಿರ್ದೇಶಕ ಅಗರಿ ನವೀನ್ ಭಂಡಾರಿ ಅವರನ್ನು ಗೌರವಿಸಲಾಯಿತು. ಇದೇ ಸಂದರ್ಭ ೨೦೨೧ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ರಲ್ಲಿ 600 ಅಂಕ ಪಡೆದ ಶರಣ್ಯ ಎ. ರೈ ಹಾಗೂ ಎಸಿಎಫ್ ಆಗಿ ಭಡ್ತಿ ಪಡೆದ ಪ್ರವೀಣ್ ಶೆಟ್ಟಿ ಸಾಮೆತ್ತಡ್ಕ ಅವರನ್ನು ಅಭಿನಂದಿಸಲಾಯಿತು.
ದತ್ತಿನಿಧಿ ಪ್ರಾಯೋಜಕರ ನಾಮಫಲಕವನ್ನು ಉದ್ಯಮಿ ಚಿಕ್ಕಪ್ಪ ನಾಯಕ್ ಅನಾವರಣಗೊಳಿಸಿದರು. ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ, ಮಲ್ಲಿಕಾ ಪ್ರಸಾದ್, ಬಂಟರ ಸಂಘದ ನಿಯೋಜಿತ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಮೀರಾ ಭಾಸ್ಕರ ರೈ, ಯುವ ಬಂಟರ ಸಂಘದ ಅಧ್ಯಕ್ಷ ಪ್ರಕಾಶ್ ರೈ ಸಾರಕೆರೆ, ಉದ್ಯಮಿ ಕರುಣಾಕರ್ ರೈ ದೇರ್ಲ, ಸಂಜೀವ ಆಳ್ವ ಹಾರಾಡಿ ಮೊದಲಾದವರು ಉಪಸ್ಥಿತರಿದ್ದರು.
ರೋಶನ್ ರೈ ಬನ್ನೂರು, ಅಶೋಕ್ ಕುಮಾರ್ ರೈ ನೆಕ್ಕರೆ, ದಿವ್ಯನಾಥ ಶೆಟ್ಟಿ, ಭರತ್ ರೈ ಪಾಲ್ತಾಡಿ, ಗಣೇಶ್ ರೈ ಮಿತ್ರಂಪಾಡಿ, ವತ್ಸಲಾ ಪದ್ಮನಾಭ ಶೆಟ್ಟಿ, ರಂಜಿನಿ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು.
ಮಲ್ಲಿಕಾ ಜೆ. ರೈ ಪ್ರಾರ್ಥಿಸಿದರು. ಬಂಟರ ಸಂಘದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ನಿತ್ಯಾನಂದ ಶೆಟ್ಟಿ ವಂದಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡಂಜಿ ಕಾರ್ಯಕ್ರಮ ನಿರೂಪಿಸಿದರು. ಚಿಲ್ಮೆತ್ತಾರು ಜಗಜೀವನ್ ದಾಸ್ ರೈ, ಸವಿತಾ ಭಂಡಾರಿ, ಸಂತೋಷ್ ಕುಮಾರ್ ಶೆಟ್ಟಿ ಸಾಜ ವಿವಿಧ ಕಾರ್ಯಕ್ರಮ ನಿರೂಪಿಸಿದರು.
ಕಳೆದ 18 ತಿಂಗಳಿನಿಂದ ಪುತ್ತೂರು ಬಂಟರ ಸಂಘದ ಅಧ್ಯಕ್ಷನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು, ಎಲ್ಲರಿಂದಲೂ ಉತ್ತಮ ಸಹಕಾರ ಸಿಕ್ಕಿದೆ. ಇಲ್ಲಿ ನಮ್ಮ ಸಮಾಜದ ಬೇರೆ ಬೇರೆ ಸಾಧಕರನ್ನು ಗುರುತಿಸುವ ಕೆಲಸ ಮಾಡುತ್ತಿದ್ದೇವೆ. ಶ್ರೀಮಂತ, ಬಡವ ಎಂಬ ಬೇಧವಿಲ್ಲದೇ ಕೆಲಸ ನಿರ್ವಹಿಸುತ್ತಿದ್ದೇವೆ. ಸಮಾಜದಲ್ಲಿ ಸೂರು ಇಲ್ಲದವರಿಗೆ ಸೂರು ಕಲ್ಪಿಸುವ ಕೆಲಸ ಆಗಬೇಕಿದೆ. ಯಾರೂ ಕೂಡ ಮನೆ ಇಲ್ಲ ಎಂಬ ಕೊರತೆಯಿಂದ ಬಳಲಬಾರದು. ಸೂರು, ವಿದ್ಯೆ, ಆರೋಗ್ಯ ಕಲ್ಪಿಸುವುದು ಬಂಟರ ಸಮಾಜದ ಪ್ರಮುಖ ಆಶಯ. ಯಾರೂ ಕೂಡ ಕಷ್ಟದಲ್ಲಿ ಇರಬಾರದು. ಅಂತವರನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ಪುತ್ತೂರು ಬಂಟರ ಸಂಘದಿಂದ ನಡೆಯುತ್ತಿದೆ.- ಬೂಡಿಯಾರ್ ರಾಧಾಕೃಷ್ಣ ರೈ ಅಧ್ಯಕ್ಷರು, ಪುತ್ತೂರು ಬಂಟರ ಸಂಘ
ದತ್ತಿನಿಧಿಗಾಗಿ ದೇಣಿಗೆ:
ರೇಖಾ ಮುತ್ತಪ್ಪ ರೈ ಮತ್ತು ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳದ ರೂವಾರಿ ಜಯಂತ ರೈಯವರ ಸ್ಮರಣಾರ್ಥ ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಎನ್.ರವರು ದತ್ತಿನಿಧಿಗಾಗಿ ೨ ಲಕ್ಷ ರೂ. ದೇಣಿಗೆ ನೀಡಿದರು. ಈ ದೇಣಿಗೆಯ ದತ್ತಿನಿಧಿಯ ಮೂಲಕ ಪ್ರತೀ ವರ್ಷ ಓರ್ವ ಕ್ರೀಡಾ ಸಾಧಕನಿಗೆ ಚಿನ್ನದ ಪದಕದೊಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿರವರು ದತ್ತಿನಿಧಿ ಪ್ರಶಸ್ತಿಗಾಗಿ 2 ಲಕ್ಷ ರೂ. ದೇಣಿಗೆ ನೀಡಿದರು. ಈ ದೇಣಿಗೆಯಿಂದ ಸಾಮಾಜಿಕ ಕ್ಷೇತ್ರದ ಸಾಧಕರಿಗೆ ಪ್ರತಿ ವರ್ಷ ಚಿನ್ನದ ಪದಕದೊಂದಿಗೆ ಪ್ರಶಸ್ತಿ ನೀಡಲಾಗುವುದು.