ಪುತ್ತೂರು: ಒಂದೇ ಸಮುದಾಯಕ್ಕೆ ಸೇರಿದ ಇತ್ತಂಡಗಳು ಹೊಡೆದಾಡಿಕೊಂಡು ಪೊಲೀಸರು ಆಗಮಿಸಿ ತಂಡವನ್ನು ಚದುರಿಸಿದ ಘಟನೆ ಅ 22 ರಂದು ಸಂಜೆ ಕುಂಬ್ರ ಪೇಟೆಯಲ್ಲಿ ನಡೆದಿದೆ.
ಹೊಡೆದಾಡಿಕೊಂಡವರು ಕಾಂಗ್ರೆಸ್ ಹಾಗೂ ಎಸ್ಡಿಪಿಐ ಪಕ್ಷದ ಕುಂಬ್ರ ಪರಿಸರದ ಕಾರ್ಯಕರ್ತರು ಎಂದು ತಿಳಿದು ಬಂದಿದೆ.
ಅ. 20 ರಂದು ಎರಡು ತಂಡಗಳ ನಡುವೆ ಹೊಡೆದಾಟ ನಡೆದು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಕುಂಬ್ರದ ವಾಟ್ಸಾಪ್ ಗ್ರೂಪಿನಲ್ಲಿ ಇಂದು ಬೆಳಿಗ್ಗೆಯಿಂದಲೇ ಎರಡು ಗುಂಪುಗಳ ನಡುವೆ ಬಿಸಿಬಿಸಿ ಚರ್ಚೆ ನಡೆದಿತ್ತು ಎನ್ನಲಾಗಿದೆ. ಇಂದು ಮಧ್ಯಾಹ್ನ ಈ ಚರ್ಚೆ ತಾರಕಕ್ಕೇರಿತ್ತು, ಇದರ ಮುಂದಿನ ಬೆಳವಣಿಗೆಯಾಗಿ ಈ ಎರಡು ತಂಡಗಳ ಮಧ್ಯೆ ಮಾರಾಮಾರಿ ನಡೆದಿದೆ ಎನ್ನಲಾಗಿದೆ.
ಇತ್ತಂಡಗಳ ಹೊಡೆದಾಟದ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಆಗಮಿಸಿದ ಸಂಪ್ಯ ಠಾಣೆ ಪೊಲೀಸರು ಎರಡು ಪಕ್ಷದ ಕಾರ್ಯಕರ್ತರನ್ನು ಅಲ್ಲಿಂದ ಚದುರಿಸಿದ್ದು, ಇತ್ತಂಡಗಳ ಒಂದಷ್ಟು ಜನರನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆಯಿಂದಾಗಿ ಸರ್ಫರಾಝ್ ಎಂಬವನಿಗೆ ಗಾಯವಾಗಿದ್ದು, ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.