ಮೈಸೂರು: ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಅಕಾಲಿಕವಾಗಿ ನಮ್ಮನ್ನು ಅಗಲಿದ್ದಾರೆ. ತಮ್ಮ ನೆಚ್ಚಿನ ನಟನ ಆಗಲಿಕೆಗೆ ಇಡೀ ನಾಡು ದಿಗ್ಭ್ರಮೆಗೊಂಡಿದೆ. ನಿನ್ನೆ ಸಂಜೆಯಿಂದ ಸಾರ್ವಜನಿಕರ ಅಂತಿಮ ದರ್ಶನಕ್ಕೆ ನಗರದ ಕಂಠೀರವ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ನಡುವೆ ಪುನೀತ್ ಅವರ ಪ್ರೀತಿಯ ಕೇಂದ್ರವಾಗಿದ್ದ ಮೈಸೂರಿನ ಶಕ್ತಿಧಾಮದಲ್ಲಿ ಅನಾಥ ಹೆಣ್ಣುಮಕ್ಕಳು ಪುನೀತ್ ಸಿನಿಮಾದ ಹಾಡುಗಳನ್ನ ಸಾಮೂಹಿಕವಾಗಿ ಹಾಡಿ ನಮನ ಸಲ್ಲಿಸಿದ್ದಾರೆ.
ಡಾ. ರಾಜ್‌ಕುಮಾರ್ ಕುಟುಂಬದ ಕನಸಾಗಿದ್ದ ಮೈಸೂರಿನ ಶಕ್ತಿಧಾಮಕ್ಕೆ ಪುನೀತ್ ರಾಜ್ ಕುಮಾರ್ ಬೆನ್ನೆಲುಬಾಗಿದ್ದರು. ಶಕ್ತಿಧಾಮ ಅನಾಥ ಹೆಣ್ಣು ಮಕ್ಕಳ ಪುನರ್ವಸತಿ ಕೇಂದ್ರವಾಗಿದ್ದು, ಪುನೀತ್ ಅವರು ಶಕ್ತಿಧಾಮಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದ್ದರು. ಕಳೆದ ವರ್ಷ ಕನ್ನಡದ ಕೋಟ್ಯಧಿಪತಿಯಿಂದ ತಮಗೆ ಬಂದಿದ್ದ 18 ಲಕ್ಷ ರೂ. ಸಂಭಾವನೆಯನ್ನು ಶಕ್ತಿಧಾಮಕ್ಕೆ ನೀಡಿದ್ದರು. ಅಲ್ಲದೇ ಪ್ರತೀ ವರ್ಷ ಮಕ್ಕಳಿಗೆ ಪುಸ್ತಕ ಹಾಗೂ ಇತರ ಅಗತ್ಯತೆಗಳನ್ನು ಪೂರೈಸುತ್ತಾ ಬಂದಿದ್ರು.
ಶಕ್ತಿಧಾಮಕ್ಕೆ ಸೇರಿದ ಮೂರು ಎಕರೆ ಪ್ರದೇಶದಲ್ಲಿ ಹೆಣ್ಣು ಮಕ್ಕಳಿಗಾಗಿ ದೊಡ್ಡ ಶಿಕ್ಷಣ ಸಂಸ್ಥೆ ಆರಂಭಿಸಲು ಪುನೀತ್ ಯೋಜನೆ ರೂಪಿಸಿದ್ದರು. ಇದಕ್ಕಾಗಿ ಸುಮಾರು 8 ಕೋಟಿ ವೆಚ್ಚದಲ್ಲಿ ಅಂದಾಜು ಕೂಡ ಮಾಡಿಸಿದ್ರು. ಈ ವರ್ಷ ಕೋವಿಡ್ ಗೆ ಮುನ್ನ ಶಕ್ತಿಧಾಮಕ್ಕೆ ಬಂದು ಬಹಳ ಹೊತ್ತು ಮಕ್ಕಳೊಂದಿಗೆ ಸಮಯ ಕಳೆದಿದ್ದರು. ಇತ್ತೀಚಿನ ದಿನಗಳಲ್ಲಿ ಪುನೀತ್ ಶಿಕ್ಷಣದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು. ಶಕ್ತಿಧಾಮಕ್ಕೆ ಬಂದು ಮಕ್ಕಳ ಜೊತೆ ಊಟ ಮಾಡುವುದು ಎಂದರೇ ಅವರಿಗೆ ತುಂಬಾ ಇಷ್ಟ. ಮಕ್ಕಳಿಗೆ ಒಳ್ಳೆಯ ಕಡೆ ಊಟ ತರಿಸಿ ಅವರೂ ಊಟ ಮಾಡುತ್ತಿದ್ದರು.
ಶಿವರಾಜ್ಕುಮಾರ್ ಅವರು ಕೂಡ ಪುನೀತ್ರ ಯೋಜನೆಗಳಿಗೆ ಕೈಜೋಡಿಸಿದ್ದರು. ಶಕ್ತಿಧಾಮದ ಸಲುವಾಗಿ ವಿದೇಶಕ್ಕೆ ಹೋಗಿ ಬರಲು ತಯಾರಿ ಮಾಡುತ್ತಿದ್ದರು. ಕನ್ನಡದ ಬೇರೆ ಬೇರೆ ನಟ ಸಹಕಾರ ಪಡೆದು ಶಕ್ತಿಧಾಮಕ್ಕೆ ನೆರವಾಗಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದರು. ಪುನೀತ್ ರ ಅಗಲಿಕೆ ಶಕ್ತಿಧಾಮ ಹಾಗೂ ಇಡೀ ಕನ್ನಡ ನಾಡಿಗೆ ತುಂಬಲಾರದ ನಷ್ಟ ಎಂದು ಶಕ್ತಿಧಾಮದ ಸಂಚಾಲಕ ಜಿ.ಎಸ್. ಜಯದೇವ್ ಕಣ್ಣೀರಿಡುತ್ತಾ ನೆನಪು ಮಾಡಿಕೊಂಡಿದ್ದಾರೆ.